ಕಾಪು ರಾಜಕೀಯಕ್ಕೆ ಮಹಿಳೆ ಎಂಟ್ರಿ ! ಈ ಮಹಿಳೆ ಭಾಜಕಾದಲ್ಲಿ ಎದುರಿಸುವರೇ ಬಿಜೆಪಿ, ಕಾಂಗ್ರೇಸ್ ..?
ಉಡುಪಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಭಾರತೀಯ ಜನಶಕ್ತಿ ಕಾಂಗ್ರೆಸ್ ನ ಮಹಾಕಾರ್ಯದರ್ಶಿ ಅನುಪಮಾ ಶೆಣೈ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು ನನ್ನ ಸ್ವಕ್ಷೇತ್ರ. ಹಾಗಾಗಿ ಬಳ್ಳಾರಿ ಅಥವಾ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
ಫೆ. 18ರಂದು ತನ್ನ ಪಕ್ಷ ನೋಂದಣಿಯಾಗಿದ್ದು, ಬೆಂಡೆಕಾಯಿ ಚಿಹ್ನೆಯನ್ನು ಚುನಾವಣಾ ಆಯೋಗವು ನೀಡಿದೆ. ಪಕ್ಷದ ವತಿಯಿಂದ ರಾಜ್ಯದಲ್ಲಿ 80ರಷ್ಟು ಮಂದಿ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ. 30 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ. ಪಕ್ಷವೊಂದು ಬೇಕು ಎಂಬ ಉದ್ದೇಶದಿಂದ ಕಟ್ಟಿರುವುದೇ ವಿನಾ ಈ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲ ಎಂದು ಅನುಪಮಾ ಹೇಳಿದರು.

ಅಭ್ಯರ್ಥಿ ಅವಕಾಶ
ನಮ್ಮ ಪಕ್ಷ ಸೇರುವವರಿಗೆ ಕ್ರಿಮಿನಲ್ ಹಿನ್ನೆಲೆ ಇರಬಾರದು, ಕನ್ನಡ ಓದಲು, ಬರೆಯಲು ಬರಬೇಕು. ಪಕ್ಷದ ಸದಸ್ಯತ್ವಕ್ಕೆ 20 ರೂ. ವಿನಾ ಬೇರೇನನ್ನೂ ತೆಗೆದುಕೊಳ್ಳುವುದಿಲ್ಲ. ಹೋರಾಟದ ಮನೋಭಾವ ಇರುವವರು ಸ್ಪರ್ಧಿಸಲು ಇಚ್ಛಿಸಿದರೆ ಉಡುಪಿ ಕ್ಷೇತ್ರದಲ್ಲಿ ಅವಕಾಶ ನೀಡಲಾಗುವುದು ಎಂದರು.
ಡಿವೈಎಸ್ ಪಿ ಆಗಿದ್ದಾಗ ನಾನು ಅಪರಾಧಿಗಳ ಬೆಂಡೆತ್ತುತ್ತಿದ್ದೆ. ಈಗ ನಾನು ಎಲ್ಲಾ ರಾಜಕೀಯ ಪಕ್ಷಗಳನ್ನು, ಭ್ರಷ್ಟ ರಾಜಕಾರಣಿಗಳನ್ನು ಬೆಂಡೆತ್ತಬೇಕು. ಈ ಕಾರಣಕ್ಕಾಗಿ ಬೆಂಡೆಕಾಯಿ ಚಿಹ್ನೆ ಆಯ್ಕೆ ಮಾಡಲಾಗಿದೆ. ಬೆಂಡೆಕಾಯಿಗೆ ಮತನೀಡಿ ಎಂದು ಅನುಪಮಾ ಶೆಣೈ ಮನವಿ ಮಾಡಿದ್ದಾರೆ.
