ಕಾರಿನೊಳಗೆ ಉದ್ಯಮಿ ಶವ ಪತ್ತೆ ; ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಆತ್ಮಹತ್ಯೆ
ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮ ವಿದ್ಯಾರತ್ನ ರಸ್ತೆಯಲ್ಲಿ ಕಾರಿನಲ್ಲಿ ಕುಳಿತು ಚಾಕುವಿನಿಂದ ಕೈ, ಹೊಟ್ಟೆಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಉದ್ಯಮಿ, ಲಕ್ಷ್ಮೀಂದ್ರನಗರದ ನಿವಾಸಿ ಓಲಿವರ್ ವಿ.ಲೂವಿಸ್(68) ಅವರ ಮೃತದೇಹ ಪತ್ತೆಯಾಗಿದೆ.
ವಿದ್ಯಾರತ್ನ ನಗರದ ಲೂವಿಸ್ ಸಂಬಂಧಿಕರ ಮನೆ ಸಮೀಪವೇ ಭಾನುವಾರ ತಡರಾತ್ರಿ ಘಟನೆ ನಡೆದಿದೆ. ಲೂವಿಸ್ ಅವರು ಲಕ್ಷ್ಮೀಂದ್ರ ನಗರ, ಮಣಿಪಾಲ, ಸಂತೆಕಟ್ಟೆಯಲ್ಲಿ ಮನೆಯನ್ನು ಹೊಂದಿದ್ದಾರೆ. 12 ವರ್ಷ ಖಾಸಗಿ ಶಿಪ್‌ನ ಕ್ಯಾಪ್ಟನ್ ಆಗಿ ಕೆಲಸ ಮಾಡಿದ್ದ ಅವರು ನಿವೃತ್ತಿ ಬಳಿಕ ಬಿಲ್ಡರ್ ಆಗಿ ಕಾರ್ಯನಿರ್ವಹಿಸುತಿದ್ದರು ಎನ್ನಲಾಗಿದೆ. ಪೊಲೀಸರು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಆಲಿವೆರಾ ಲೂಯೀಸ್ ಆತ್ಮಹತ್ಯೆ ಮಾಡಿಕೊಂಡ ಬಿಲ್ಡರ್. ಲೂಯೀಸ್ ತಮ್ಮ ಕಾರಿನಲ್ಲಿ ಮೊದಲು ತಮ್ಮ ಕೈಗೆ ಚಾಕುವಿನಿಂದ ಕೊಯ್ದುಕೊಂಡು, ನಂತರ ಹೊಟ್ಟೆಗೆ ಇರಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ತಡರಾತ್ರಿ ಮಣಿಪಾಲದ ಪೆರಂಪಳ್ಳಿಯ ಸಂಬಂಧಿಕರ ಮನೆಯ ಸಮೀಪ ತಮ್ಮ ಫೋರ್ಡ್ ಕಾರಿನಲ್ಲೇ ಆತ್ಮಹತ್ಯೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಪತ್ನಿಗೆ ಡೆತ್‍ನೋಟ್ ಬರೆದಿರುವ ಲೂಯಿಸ್, ನನ್ನ ಸಾವಿಗೆ ನಾನೇ ಕಾರಣ. ಮಕ್ಕಳನ್ನು ಚೆನ್ನಾಗಿ ನೋಡಿಕೋ. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಬರೆದಿದ್ದಾರೆ.
ಕಾರಿನ ಬಲಭಾಗದ ಸೀಟ್‌ನಲ್ಲಿ ಮೃತದೇಹ ಸಂಪೂರ್ಣ ಮರಗಟ್ಟಿದ ಸ್ಥಿತಿಯಲ್ಲಿತ್ತು, ಲೂವೀಸ್ ಬಲಗೈನಲ್ಲಿ ಚಾಕು ಹಿಡಿದುಕೊಂಡಿದ್ದರು. ಯಾರೂ ನೋಡಬಾರದು ಎಂದು ಕಾರಿನ ಗ್ಲಾಸ್ ಮುಂಭಾಗ ಬಿಸಿಲಿಗೆ ಮುಚ್ಚುವ ಕವರ್ ಮುಚ್ಚಿದ್ದರು. ಕಾರನ್ನು ಲಾಕ್ ಮಾಡಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆ ಕೊಯ್ದಿರುವುದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿರುವ ಸಾಧ್ಯತೆ ಇದೆ. ಮಣಿಪಾಲ ವೈದ್ಯರು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಮಣಿಪಾಲದ ಕೆಎಂಸಿಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳದಲ್ಲಿ ದೊರೆತ ಚಾಕು ಮತ್ತು ಮರಣಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

