ಕಾರ್ಕಳ: ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು ; ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ – Vishwanews24
ಇದು ಪಂಚಾಯತ್ ನಿಂದ ಅಧಿಕೃತವಾಗಿ ಹಾಕಲಾದ ನಾಮಫಲಕವಲ್ಲ..
ಬೆಳ್ಮಣ್: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ಹೆಸರು ಇಡಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ ‘ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ’ ಎಂದು ನಾಮಫಲಕ ಹಾಕಲಾಗಿದೆ.
ಈ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
“ಇದು ಖಾಸಗಿಯವರು ಹಾಕಿದ ನಾಮಫಲಕ. ಪಂಚಾಯತ್ ನಲ್ಲಿ ಈ ಹೆಸರಿಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪಂಚಾಯತ್ ಈ ನಾಮಫಲಕ ಹಾಕಿಲ್ಲ” ಎನ್ನುತ್ತವೆ ಬೋಳ ಪಂಚಾಯತ್ ಮೂಲಗಳು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಶಾಸಕ, ಸಚಿವ ಸುನೀಲ್ ಕುಮಾರ್, “ಇದು ಪಂಚಾಯತ್ ನಿಂದ ಅಧಿಕೃತವಾಗಿ ಹಾಕಲಾದ ನಾಮಫಲಕವಲ್ಲ. ಖಾಸಗಿಯವರು ಹಾಕಿದ್ದಾರೆ. ಈ ಬಗ್ಗೆ ಪಂಚಾಯತ್ ನವರು ಪರಿಶೀಲಿಸಿ ಅಧಿಕೃತ ವಸ್ತುಸ್ಥಿತಿಯನ್ನು ಸಾರ್ವಜನಿಕರ ಮುಂದಿಡುತ್ತಾರೆ” ಎಂದರು.
ಘಟನೆ ವಿವಾದ ರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಗ್ರಾಮ ಪಂಚಾಯತ್ ನಾಮಫಲಕ ತೆರವು ಮಾಡಿದೆ.
