ಕುಂದಾಪುರ ಕೋಡಿ ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೂತಾಯಿ ಮೀನು ; ಸ್ಥಳೀಯರಿಗೆ ಮೀನೂಟದ ಹಬ್ಬ
ಉಡುಪಿ, : ಉಡುಪಿಯಲ್ಲಿ ಈ ಬಾರಿ ಮೀನುಗಾರರು ಬಂಪರ್ ಲಾಟರಿ ಹೊಡೆದಿದ್ದಾರೆ. ಎಲ್ಲಿ ನೋಡಿದರೂ ಬರಿ ಮೀನಿನ ರಾಶಿಯೇ ಈ ಬಾರಿ ಉಡುಪಿ ಮೀನುಗಾರರಿಗೆ ದೊರೆಯುತ್ತಿದ್ದು, ಮೀನಿನ ಸುಗ್ಗಿಯಾಗಿದೆ.
ಉಡುಪಿ ಜಿಲ್ಲೆ ಕುಂದಾಪುರದ ಕೋಡಿ ಬೀಚಲ್ಲಿ ಈ ಘಟನೆ ನಡೆದಿದೆ. ಕೋಡಿಯ ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ಕೈರಂಪಣಿ ಎಂಬ ಬಲೆ ಹಾಕಿದ್ದರು. ಎಲ್ಲಾ ಮೀನುಗಾರರು ಸಾಲಾಗಿ ನಿಂತು ದಡದ ಕಡೆ ಬಲೆ ಎಳೆಯುವಾಗ ನಿರೀಕ್ಷೆ ಮೀರಿ ನೂರು ಪಟ್ಟು ಹೆಚ್ಚು ಮೀನು ಬಲೆಗೆ ಬಿದ್ದಿದೆ.
ಕಣ್ಣು ಹಾಯಿಸಿದಲ್ಲೆಲ್ಲಾ ಬಲೆಯ ವ್ಯಾಪ್ತಿಯಿಂದ ಹಾರುವ ಮೀನು ಕಾಣುತ್ತಿದ್ದು, ವೀಡಿಯೋ ಬಹಳ ಕುತೂಹಲ ಹುಟ್ಟಿಸುತ್ತದೆ. ಸಮುದ್ರದ ಮಧ್ಯೆಯಲ್ಲಿ ಮೀನಿನ ಬುಗ್ಗೆ ಕಾಣಿಸೋದು ಸಾಮಾನ್ಯ, ಆದ್ರೆ ಕಡಲ ಬದಿಯಲ್ಲಿ ಇಷ್ಟೊಂದು ಗಾತ್ರದಲ್ಲಿ ಮೀನು ಸಿಕ್ಕಿದ್ದು ಮೀನುಗಾರರಿಗೆ ಆಶ್ಚರ್ಯ ತಂದಿದೆ.
ಸಮುದ್ರ ತೀರದಲ್ಲಿ ಮೀನುಗಾರರು ಎರಡು ನಾಡದೋಣಿಗಳಿಗೆ ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ ನಾಡದೋಣಿಗಳ ಬಲೆಗೆ ಸಿಲುಕಿದೆ. ಇಡೀ ದೋಣಿಯ ಸುತ್ತಲೂ ರಾಶಿ ರಾಶಿ ಮೀನು ಸೆರೆ ಸಿಕ್ಕಿದ ವೀಡಿಯೋ ಲಭ್ಯವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿದೆ. ಕರಾವಳಿ ಫ್ರೆಂಡ್ಸ್ ಬಲೆಗೆ ಮೂರು ಸಾವಿರ ಕೆಜಿಯಷ್ಟು ಬೂತಾಯಿ ಸಿಕ್ಕಿದೆ. ಮೀನುಗಳು ಒದ್ದಾಡುವ ರಭಸಕ್ಕೆ ಬಲೆಯೇ ಹರಿದು 10 ಸಾವಿರ ಕೆಜಿಯಷ್ಟು ಮೀನು ಮತ್ತೆ ಸಮುದ್ರ ಪಾಲಾಗಿದೆ ಅಂತ ಸ್ಥಳೀಯರು ಹೇಳಿದ್ದಾರೆ.
ಕೈರಂಪಣಿ ಬಲೆಯಲ್ಲಿ 16 ಮಂದಿ ಮೊದಲು ಬಲೆ ಬೀಸಿದ್ದು, ಮೀನಿನ ರಾಶಿಯನ್ನು ಕಂಡು ಸ್ಥಳೀಯ 50ಕ್ಕು ಹೆಚ್ಚು ಯುವಕರನ್ನು ಕರೆಸಲಾಯ್ತು. ಸ್ಥಳೀಯರಂತೂ ಬಲೆಯಿಂದ ಜಿಗಿದು ದಡ ಸೇರಿದ್ದ ಮೀನನ್ನು ಹಿಡಿಯಲು ಬೀಚ್ ಬದಿ ಮುಗಿಬಿದ್ದರು.
ಮೀನುಗಾರರ ಪ್ರಕಾರ ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಬೂತಾಯಿ ಮೀನುಗಳು ದಡಕ್ಕೆ ಬಂದಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ದೋಣಿಗಾರಿಕೆ, ದೋಣಿಗಳ ಎಂಜಿನ್ ಶಬ್ದಕ್ಕೆ ಹೆದರಿ ಮೀನುಗಳು ಗಂಪಾಗಿ ಹೋಗುತ್ತಿದ್ದು, ಅದೇ ವೇಳೆ ಅಲೆಗಳ ಅಬ್ಬರದಿಂದ ದಡದತ್ತ ತೇಲಿಬಂದಿರಬಹುದು ಎನ್ನುತ್ತಾರೆ ಮೀನುಗಾರರು.



vishwanews24
