ಕೇರಳ ಲವ್ ಜಿಹಾದ್ ಪ್ರಕರಣ : ಹಾದಿಯಾ ತಂದೆ ಅಶೋಕನ್ ಬಿಜೆಪಿಗೆ ಸೇರ್ಪಡೆ
ಕೊಚ್ಚಿ: ಕೇರಳ ಲವ್ ಜಿಹಾದ್ ಪ್ರಕರಣದ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಯುವತಿ ಹಾದಿಯಾ ತಂದೆ ಅಶೋಕನ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಶಬರಿಮಲೆಯಲ್ಲಿ ಕೇರಳ ಬಿಜೆಪಿ ಮುಖಂಡ ಜಿ.ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಅಶೋಕನ್ ಸೇರಿದಂತೆ 50 ಮಂದಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಸೇರ್ಪಡೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅಶೋಕನ್ ಅವರು ನಾನು ಕಳೆದ ಮೂರು ವರ್ಷಗಳ ಹಿಂದೆಯೇ ಬಿಜೆಪಿ ಸೇರ್ಪಡೆಯಾಗಿದ್ದೆ. ಆದರೆ ಈಗ ನನಗೆ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಸಿಕ್ಕಿದೆ ಎಂದು ಹೇಳಿದರು.
ತಮಿಳುನಾಡಿನ ಸೇಲಂನಲ್ಲಿ ಹೋಮಿಯೋಪಥಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಅಖಿಲಾ, ಶಫಿನ್ ಜಹಾನ್ ಎಂಬ ಮುಸ್ಲಿಂ ಯುವಕನನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿವಾಹವಾಗಿ ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ಹಾದಿಯಾ ಎಂದು ಬದಲಿಸಿಸಿಕೊಂಡಿದ್ದರು.ತಮ್ಮ ಪುತ್ರಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಮತ್ತು ಆಕೆಯನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಅಶೋಕನ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ನಂತರ ಹಾದಿಯಾ ಅಂತರ್‌ಧರ್ಮಿಯ ವಿವಾಹ ತೀವ್ರ ಕುತೂಹಲ ಕೆರಳಿಸಿತ್ತು.
ಅಂತೆಯೇ ಇದಕ್ಕೂ ಮೊದಲು ನಾನು ಕಮ್ಯುನಿಸ್ಟ್ ಪಕ್ಷದಲ್ಲಿದ್ದೆ. ಆದರೆ ಪಕ್ಷದ ಸಿದ್ಧಾಂತಗಳು ಮತ್ತು ಅಜೆಂಡಾಗಳು ಇಷ್ಟವಾಗದೇ ಅಲ್ಲಿಂದ ಹೊರನಡೆದೆ ಎಂದು ಹೇಳಿದರು. ಅಂತೆಯೇ ಶಬರಿಮಲೆ ವಿವಾದದ ಕುರಿತು ಬಿಜೆಪಿ ನಡೆಸುತ್ತಿರುವ ಹೋರಾಟದಲ್ಲೂ ಪಾಲ್ಗೊಳ್ಳುತ್ತೇನೆ ಎಂದು ಘೋಷಣೆ ಮಾಡಿರುವ ಅಶೋಕನ್ ಅವರು, ಶಬರಿಮಲೆ ವಿವಾದ ಸಂಬಂಧ ಸುಪ್ರೀಂ ಕೋರ್ಚ್ ನೀಡಿರುವ ತೀರ್ಪು ಮರು ಪರಿಶೀಲನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

