ಕೊಲೆ ಮಾಡಿಸುತ್ತಿದೆ ಸಿಎಂ ನೇತೃತ್ವದ ಕಾಂಗ್ರೆಸ್ ಸರ್ಕಾರ: ಅಮಿತ್ ಷಾ
ಬೆಂಗಳೂರು: ಪ್ರಧಾನಿ ಮೋದಿ ಸರ್ಕಾರ ಬದುಕಿ ಎಂದು ಹೇಳುತ್ತಿದ್ದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಲೆಗಳನ್ನು ಮಾಡಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು.
ಸಭೆಯಲ್ಲಿ ಮಾತನಾಡಿ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಕೃಷ್ಣಪ್ಪ ಭ್ರಷ್ಟಾಚಾರದ ಮೆಡಲ್ ಹಾಕಿಕೊಂಡು ಸರ್ಕಾರದಲ್ಲಿ ಇದ್ದಾರೆ ಎಂದು ಆರೋಪ ಮಾಡಿದರು.
ಈ ಬಾರಿ ಚುನಾವಣೆ ಗೆಲುವು ಬೂತ್ ಮಟ್ಟದ ಕಾರ್ಯಕರ್ತರ ಕೈಯಲ್ಲಿದೆ. ಬೇರೆ ಪಕ್ಷಗಳಲ್ಲಿ ಚುನಾವಣೆ ನಾಯಕರ ನೇತೃತ್ವದಲ್ಲಿ ನಡೆದರೆ, ನಮ್ಮ ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಕೇಂದ್ರೀಕರಿಸಿ ನಡೆಸಲಾಗುತ್ತದೆ. 10 ಜನರಿಂದ ಆರಂಭವಾದ ನಮ್ಮ ಪಕ್ಷ ಇವತ್ತು ವಿಶ್ವದ ಅತಿ ದೊಡ್ಡ ಪಕ್ಷವಾಗಿದೆ. 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಮೋದಿಯವರ ಕೆಲಸದಿಂದ ಭಾರತ ವಿಶ್ವಮಟ್ಟದಲ್ಲಿ ಹೆಸರಾಗಿದೆ ಎಂದು ಹೇಳಿದರು.
ಈ ಚುನಾವಣೆ ಬಿಜೆಪಿಗೆ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಸಿಎಂ ಮಾಡುವವರೆಗೂ ಕಾರ್ಯಕರ್ತರು ನಿದ್ದೆ ಮಾಡಬಾರದು. ಮೇ 15 ರಂದು ಯಡಿಯೂರಪ್ಪನವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದರು.
ಕರ್ನಾಟಕವನ್ನು ಹಾಳುಗೆಡವಿದ ಸಿಎಂ
ಕರ್ನಾಟಕ, ಬೆಂಗಳೂರನ್ನು ಸಿಎಂ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಬೆಂಗಳೂರು ವಿಕಾಸ ಆಗಬೇಕು. ಈ ಸರ್ಕಾರದ ಎಲ್ಲ ನಾಯಕರಿಗೆ ಕಾಮಗಾರಿಗಳ ಕಮಿಷನ್ ಹೋಗಲೇಬೇಕು. ಮೋದಿ ಸರ್ಕಾರ ಕರ್ನಾಟಕಕ್ಕೆ 3 ಲಕ್ಷ ಕೋಟಿ ರೂಪಾಯಿ ನೀಡಿದೆ. ಆ ಹಣವೆಲ್ಲ ಕಾಂಗ್ರೆಸ್ ನಾಯಕರ ಜೇಬು ಸೇರಿದೆ. ನಮ್ಮ ಸರ್ಕಾರದ ಯಾವ ಯೋಜನೆಗಳನ್ನೂ ಸಿದ್ದರಾಮಯ್ಯ ಜನರಿಗೆ ತಲುಪಿಸಿಲ್ಲ. ಇದೊಂದು ಕಮಿಷನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು,. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮತ್ತಿತರರು ಪಾಲ್ಗೊಂಡಿದ್ದರು.
