ಖುಷಿಯಿಂದ ಮೈತ್ರಿ ಸರ್ಕಾರ ರಚಿಸಿಲ್ಲ ; ಬಿಜೆಪಿಯನ್ನು ದೂರವಿರಿಸುವುದೇ ಮುಖ್ಯ ಉದ್ದೇಶವಾಗಿತ್ತು: ಖರ್ಗೆ

Featured, ರಾಜ್ಯ ನ್ಯೂಸ್

 “”ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಉದ್ದೇಶದಿಂದ ಮೈತ್ರಿ ಸರ್ಕಾರ ರಚಿಸಲಾಗಿದೆಯೇ ಹೊರತು ಖುಷಿಯಿಂದ ಸರ್ಕಾರ ರಚಿಸಿಲ್ಲ” ಎಂದು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಗಣೇಶ ಮೈದಾನದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ನೂತನ ಸಚಿವ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗುವ ಸ್ಥಿತಿ ಯಾಕೆ ಬಂತು? ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಯಾಕೆ ಬರಲಿಲ್ಲ? ರಾಜ್ಯದ ಜನರು ಯಾಕೆ ಈ ಶಿಕ್ಷೆ ನೀಡಿದ್ದಾರೆ ಎಂಬುದು ಇಂದಿಗೂ ನನಗೆ ಕಾಡುತ್ತಿದೆ ಎಂದರು.

ಕಾಂಗ್ರೆಸ್‌ ಪಕ್ಷ ನನಗೆ 11ಚುನಾವಣೆಗಳಲ್ಲಿ ಟಿಕೆಟ್‌ ನೀಡಿದ್ದು, ಎಲ್ಲ ಚುನಾವಣೆಗಳಲ್ಲೂ ಗೆಲುವು ಸಾಧಿಸಿದ್ದೇನೆ ಎಂದ ಅವರು, ಇನ್ನೊಂದು ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು.