ಗೋಹತ್ಯೆ ನಿಷೇಧ ಕಾಯ್ದೆ : ಬಿಜೆಪಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದೆ : ಮೆಚ್ಚುಗೆ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್ -Vshwanews24
ಗೋಹತ್ಯೆ ನಿಷೇಧ ಕಾಯ್ದೆ : ಬಿಜೆಪಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದೆ : ಮೆಚ್ಚುಗೆ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್ -Vshwanews24
ಬೆಂಗಳೂರು: ರಾಜ್ಯ ಸರ್ಕಾರ ರೂಪಿಸಿರುವ ಗೋಹತ್ಯೆ ನಿಷೇಧ ಕಾನೂನನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ವಾಗತಿಸಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಸಾಯಿಖಾನೆಗಳನ್ನ ಹದ್ದುಬಸ್ತಿನಲ್ಲಿಡಲು ಕಾನೂನಿನಲ್ಲಿ ಒಂದು ಅಂಶ ಇಡಬೇಕಿತ್ತು. ಹಾಗೆಯೇ, ಗೋಹತ್ಯೆ ಮಾಡುವವರಿಗೆ ಜೈಲು ಶಿಕ್ಷೆಯನ್ನು ಏಳು ವರ್ಷದ ಬದಲು 10 ವರ್ಷಕ್ಕೆ ಹೆಚ್ಚಿಸಬೇಕಿತ್ತು. ಈ ಮೊದಲೇ ಇರುವ ಕಾನೂನಿನಲ್ಲಿ 3 ವರ್ಷದವರೆಗೆ ಜೈಲುಶಿಕ್ಷೆಗೆ ಅವಕಾಶ ಇದೆ. ಇದನ್ನ ಈಗ 7 ವರ್ಷಕ್ಕೆ ಹೆಚ್ಚಿಸಲಾಗಿದೆ. ಆದರೂ ಆರೋಪಿಗಳು ಜಾಮೀನು ತೆಗೆದುಕೊಳ್ಳಲು ಸಾಧ್ಯವಿದೆ. ಶಿಕ್ಷೆಯ ಅವಕಾಶವನ್ನ 10 ವರ್ಷಕ್ಕೆ ಏರಿಸಿದರೆ ಆರೋಪಿಗಳು ಜಾಮೀನು ಪಡೆಯಲು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಶಿಕ್ಷೆ ಪ್ರಮಾಣದ ಅವಕಾಶವನ್ನು ಹೆಚ್ಚಿಸಬೇಕಿತ್ತು ಎಂದು ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.
ಗೋಹತ್ಯೆ ನಿಷೇಧ ಸಂಬಂಧ 1964ರ ಕಾನೂನು ಇದೆ. ಇದು ವರ್ಷದವರೆಗೆ ಶಿಕ್ಷೆ ನೀಡುತ್ತದೆ. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ಗೋಕಳ್ಳರು ಮತ್ತು ಗೋರಕ್ಷಕರು ಇಬ್ಬರಿಗೂ ಶಿಕ್ಷೆ ವಿಧಿಸುವಂಥ ಕಾನೂನು ಇತ್ತು. ಗೋ ರಕ್ಷಣೆ ಮಾಡಿದವರಿಗೂ ಶಿಕ್ಷೆ ನೀಡುತ್ತಿತ್ತು ಕಾಂಗ್ರೆಸ ಸರ್ಕಾರ. ಅಲ್ಲದೆ 1964ರ ಕಾನೂನಿನಲ್ಲಿ ಬಹಳ ಲೋಪದೋಷಗಳಿದ್ದವು. ಈಗ ಹೊಸ ಕಾಯ್ದೆಯಲ್ಲಿ ಸಾಕಷ್ಟು ಕಾನೂನು ಬಿಗಿಗೊಳಿಸಲಾಗಿದೆ. ವಧೆಗಾಗಿ ಸಾಗಿಸುವ ಗೋವುಗಳಿಗೆ ಪಶುವೈದ್ಯಾಧಿಕಾರಿಯಿಂದ ಪ್ರಮಾಣಪತ್ರ ತರಬೇಕು; ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಲು ಪಿಎಸ್ಐ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡಿರುವುದು ಸೇರಿದಂತೆ ಹಲವು ಕಾನೂನುಗಳು ಚೆನ್ನಾಗಿವೆ ಎಂದು ಮುತಾಲಿಕ್ ಪ್ರಶಂಸೆ ಮಾಡಿದ್ದಾರೆ.
