ಚಲಿಸುತ್ತಿದ್ದ ವೋಲ್ವೊ ಬಸ್ಸಿನೊಳಗೆ ಅಪ್ಪಳಿಸಿದ ಮರದ ಕೊಂಬೆ ; ನಿರ್ವಾಹಕ ಸ್ಥಳದಲ್ಲೇ ಸಾವು

Featured, ಉಡುಪಿ

ಭಟ್ಕಳ, : ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಮರದ ಕೊಂಬೆಯೊಂದು ಬಲವಾಗಿ ಅಪ್ಪಳಿಸಿದ್ದರಿಂದ ಬಸ್ ನಿರ್ವಾಹಕ ಮೃತಪಟ್ಟ ಘಟನೆ ಗುರುವಾರ ರಾತ್ರಿ ಭಟ್ಕಳದಲ್ಲಿ ನಡೆದಿದೆ.

ಮೃತರನ್ನು ಬೆಳಗಾವಿ ಮೂಲದ ಪಂಚಯ್ಯ ಮಠಪತಿ(35) ಎಂದು ಗುರುತಿಸಲಾಗಿದೆ.

ಮಂಗಳೂರು-ಭಟ್ಕಳ ನಡುವಿನ ಈ ಬಸ್ ಗುರುವಾರ ರಾತ್ರಿ 8:55ರ ಸುಮಾರಿಗೆ ಭಟ್ಕಳ ತಲುಪಿತ್ತು. ಅಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಬಸ್ ಚಾಲಕ ಮತ್ತು ನಿರ್ವಾಹಕ ಪಂಚಯ್ಯ 9:30ರ ಸುಮಾರಿಗೆ ಬಸ್ಸಿನಲ್ಲಿ ಸಾಗರ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ಡಿಪೋಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾವೊಂದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಚಾಲಕ ಬಸ್ಸನ್ನು ರಸ್ತೆ ಬದಿಗಿಳಿಸಿದಾಗ ಮರದ ದೊಡ್ಡ ಕೊಂಬೆಯೊಂದು ಬಸ್ಸಿನೊಳಗೆ ನುಗ್ಗಿದೆ. ಈ ವೇಳೆ ಅಲ್ಲೇ ಸೀಟಿನಲ್ಲಿ ಕುಳಿತಿದ್ದ ಪಂಚಯ್ಯರಿಗೆ ಕೊಂಬೆ ರಭಸವಾಗಿ ಅಪ್ಪಳಿಸಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ತಿಳಿದುಬಂದಿದೆ.

ಈ ಬಗ್ಗೆ ಭಟ್ಕಳ ಗ್ರಾಮೀಣ ಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ.