ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ – ಸಂಚಾರ ಅಸ್ತವ್ಯಸ್ತ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇದೀಗ ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ ಸಂಭವಿಸಿದ್ದರಿಂದ ಸಂಚಾರ ಸ್ಥಗಿತವಾಗಿದೆ.

ಬೆಳ್ತಂಗಡಿ ತಾಲೂಕಿನ 3 ಮತ್ತು 10ನೇ ತಿರುವಿನಲ್ಲಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದ್ದು, ರಸ್ತೆ ತುಂಬೆಲ್ಲ ಮಣ್ಣು ಬಿದ್ದಿದೆ. ಮಣ್ಣು ತೆರವು ಕಾರ್ಯಾಚರಣೆ ಚುರುಕುಗೊಂಡಿದ್ದು, ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜೀವ ನದಿಗಳಿಗೆ ಕಳೆ ಬಂದಿದ್ದು, ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಟ್ಟಿಗೆಹಾರ, ಚಾರ್ಮಾಡಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಚಾರ್ಮಾಡಿಯಲ್ಲಿ ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗುತ್ತಿದ್ದು, ಮಳೆ-ಗಾಳಿಗೆ ಮರಗಳು ಧರೆಗುರುಳುತ್ತಿವೆ.

ಇನ್ನೊಂದೆಡೆ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವುದರಿಂದ ಅಲೆಗಳ ಅಬ್ಬರವೂ ಜೋರಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.