ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ವೈದ್ಯಕೀಯ ಪ್ರೊಸೀಜರ್‌ಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಆರೋಗ್ಯ ಇಲಾಖೆ ಖಡಕ್ ಸೂಚನೆ ನೀಡಿದೆ. ಈ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ದರಪಟ್ಟಿ ಪ್ರದರ್ಶಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮುನ್ನವೇ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಚಿಕಿತ್ಸಾ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು ಹಾಗೂ ವೈದ್ಯಕೀಯ ಪ್ರಕ್ರಿಯೆಗಳ ದರವನ್ನು ಸಾರ್ವಜನಿಕರಿಗೆ ಸುಲಭವಾಗಿ ಕಾಣುವ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ಬಗೆಯ ಚಿಕಿತ್ಸೆಗಳು ಮತ್ತು ವೈದ್ಯಕೀಯ ಪ್ರೊಸೀಜರ್‌ಗಳು ಲಭ್ಯವಿರುವುದರಿಂದ ಎಲ್ಲದರ ದರಪಟ್ಟಿಯನ್ನು ಪ್ರದರ್ಶಿಸುವುದು ಕಷ್ಟ ಎಂದು ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಆರೋಗ್ಯ ಇಲಾಖೆಯೊಂದಿಗಿನ ಸಭೆಯಲ್ಲಿ ತಿಳಿಸಿತ್ತು. ಇದನ್ನು ಪರಿಗಣಿಸಿರುವ ಇಲಾಖೆ ಪರ್ಯಾಯ ವ್ಯವಸ್ಥೆ ರೂಪಿಸಿದೆ. ಅದರಂತೆ ಪ್ರಮುಖ ಚಿಕಿತ್ಸೆಗಳು ಮತ್ತು ವೈದ್ಯಕೀಯ ಪ್ರಕ್ರಿಯೆಗಳ ದರಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಉಳಿದ ಚಿಕಿತ್ಸೆಗಳ ದರಗಳನ್ನು ಒಳಗೊಂಡ ಪ್ರತ್ಯೇಕ ಬುಕ್‌ಲೆಟ್ ಸಿದ್ಧಪಡಿಸಬೇಕು. ರೋಗಿಗಳು ಅಥವಾ ಅವರ ಸಂಬಂಧಿಕರು ಕೇಳಿದಾಗ ಈ ಬುಕ್‌ಲೆಟ್ ನೀಡಬೇಕು ಎಂದು ಸೂಚಿಸಲಾಗಿದೆ. ಆರೋಗ್ಯ ಇಲಾಖೆಯ ಈ ಪ್ರಸ್ತಾವನೆಗೆ ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಕೂಡ ಒಪ್ಪಿಗೆ ಸೂಚಿಸಿದೆ.
ರಾಜ್ಯದ ಹಲವು ಖಾಸಗಿ ಆಸ್ಪತ್ರೆಗಳು ಇನ್ನೂ ದರಪಟ್ಟಿಯನ್ನು ಪ್ರದರ್ಶಿಸಿಲ್ಲ ಎಂಬುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ನಿಯಮ ಅನುಷ್ಠಾನದಲ್ಲಿ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಅವುಗಳನ್ನು ಸರ್ಕಾರದ ಗಮನಕ್ಕೆ ತರುವಂತೆಯೂ ನಿರ್ದೇಶಿಸಲಾಗಿದೆ.
ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ, ನಿಯಮ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆದರೆ, ದರಪಟ್ಟಿ ಪ್ರದರ್ಶಿಸುವ ನಿಯಮವನ್ನು ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ. ಈ ಕ್ರಮದಿಂದ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಬಗ್ಗೆ ಮುಂಚಿತವಾಗಿ ಮಾಹಿತಿ ದೊರೆಯಲಿದ್ದು, ಆಸ್ಪತ್ರೆಗಳ ಚಿಕಿತ್ಸಾ ದರಗಳಲ್ಲಿ ಪಾರದರ್ಶಕತೆ ಹೆಚ್ಚುವ ನಿರೀಕ್ಷೆಯಿದೆ.
ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ ಮಂಗಳೂರು: ನಗರದ ಪಂಪ್‌ವೆಲ್ ಬಳಿ ಮೊಟ್ಟೆ…
ಶಬರಿಮಲೆಯಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆ ಆರಂಭ ; ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಭಕ್ತರು ಶಬರಿಮಲೆ : ಪವಿತ್ರ ಕ್ಷೇತ್ರ ಶಬರಿಮಲೆ…
ಬೈಕಂಪಾಡಿ : ಅನೈರ್ಮಲ್ಯ ಕಾರಣ; ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಬೀಗ ಸುರತ್ಕಲ್: ಸುರತ್ಕಲ್ ವ್ಯಾಪ್ತಿಯಲ್ಲಿ ದ.ಕ. ಜಿಲ್ಲಾ…
ಮಂಗಳೂರು :ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ.. ಟೇಕ್ ಆಫ್ ವೇಳೆ ಇಂಜಿನ್‌ನಲ್ಲಿ ದೋಷ .. 236 ಪ್ರಯಾಣಿಕರು ಅಪಾಯದಿಂದ…
**ಕಾಪು ಹೊಸ ಮಾರಿಗುಡಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಭೇಟಿ** ಕಾಪು: ಕೇಂದ್ರ ಉಕ್ಕು ಮತ್ತು ಬೃಹತ್…
ಮತಾಂತರ ನಿಷೇಧ, ಗೋಹತ್ಯೆ ಪ್ರತಿಬಂಧಕ ಕಾಯ್ದೆ ವಾಪಸು ಪಡೆದರೆ ರಾಜ್ಯಾದ್ಯಂತ ಬೃಹತ್ ಜನಾಂದೋಲನ: ವಿಹಿಂಪ ಎಚ್ಚರಿಕೆ ಉಡುಪಿ: ರಾಜ್ಯ ಸರ್ಕಾರವು…