ಜನರಿಗೆ ಬಿಜೆಪಿಯವರ ಮೋಸದ ಅರಿವಾದಾಗ ಖಂಡಿತಾ ಅಧಿಕಾರದಿಂದ ಕಿತ್ತೊಗೆಯುತ್ತಾರೆ : ವಿನಯಕುಮಾರ್ ಸೊರಕೆ -Vishwanews24
ಉದ್ಯಾವರ: ಬಿಜೆಪಿಯವರು ಅಪಪ್ರಚಾರ ಮಾಡಿ ಜನತೆಯ ಮಾನಸಿಕತೆಯನ್ನು ಭಾವನಾತ್ಮಕವಾಗಿ ಭ್ರಷ್ಟಗೊಳಿಸಿ ಅಧಿಕಾರವನ್ನು ಹಿಡಿದಿರಬಹುದು. ಇದು ಏನೂ ಶಾಶ್ವತವಲ್ಲ. ಜನರಿಗೆ ಇವರ ಮೋಸದ ಅರಿವಾದಾಗ ಖಂಡಿತಾ ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆಯವರು ಹೇಳಿದರು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಮಾತನಾಡಿದ ಅವರು, ನಮ್ಮ ಅಭಿವೃದ್ಧಿ ಮತ್ತು ಜನಪರ ಕೆಲಸಗಳನ್ನು ಎದುರಿಸಲಾಗದೇ ಬಿಜೆಪಿಯವರು ಧರ್ಮ, ಗಡಿ, ಸೈನ್ಯ ಮೊದಲಾದ ಭಾವನಾತ್ಮಕ ಸಂಗತಿಗಳನ್ನು ಮುನ್ನಲೆಗೆ ತಂದು ಅಪಪ್ರಚಾರ ಮಾಡಿ ಜನತೆಯ ಮಾನಸಿಕತೆಯನ್ನು ಭಾವನಾತ್ಮಕವಾಗಿ ಭ್ರಷ್ಟಗೊಳಿಸಿ ಅಧಿಕಾರವನ್ನು ಹಿಡಿದಿರಬಹುದು. ಇದು ಏನೂ ಶಾಶ್ವತವಲ್ಲ. ಜನರಿಗೆ ಇವರ ಮೋಸದ ಅರಿವಾದಾಗ ಖಂಡಿತಾ ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದರು.
ಸೋತ ಕಾಂಗ್ರೆಸ್ ಪಕ್ಷ ಫಿನಿಕ್ಸ್ ನಂತೆ ಎದ್ದು ಬಂದ ಇತಿಹಾಸ ನಮ್ಮ ಮುಂದೆ ಇದೆ. ಹಾಗಾಗಿ ಕಾರ್ಯಕರ್ತರು ದೃತಿಗೆಡಬೇಕಾಗಿಲ್ಲ, ನಾವೆಲ್ಲಾ ಒಗ್ಗಟ್ಟಾಗಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳೋಣ ಎಂದು ಹೇಳಿದರು.
ದೇಶದ ಆರ್ಥಿಕ ಸ್ಥಿತಿ ಕಂಡು ಕೇಳರಿಯದ ರೀತಿಯಲ್ಲಿ ಕುಸಿಯುತ್ತಿದೆ. ನಿರುದ್ಯೋಗ ತಾಂಡವ ಆಡುತ್ತಿದೆ. ಬಿಜೆಪಿಯ ಈ ರೀತಿ ಜನತೆಯನ್ನು ದಾರಿ ತಪ್ಪಿಸುವ ಕೆಲಸವನ್ನು ವಿಫಲಗೊಳಿಸಲು ನಮ್ಮ ಕಾರ್ಯಕರ್ತರು ಸಜ್ಜಾಗಬೇಕಾಗಿದೆ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ ನುಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್ ವಹಿಸಿದ್ದರು. ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್ ಉಪಸ್ಥಿತರಿದ್ದರು. ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶ್ರೀ ಆಬಿದ್ ಆಲಿಯವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು
