ಜನರ ಸಮಸ್ಯೆಗಳನ್ನು ಪರಿಹರಿಸಿ : ಆರ್.ವಿ.ದೇಶಪಾಂಡೆ -Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಮೈಸೂರು,: ಗ್ರಾಮಗಳಿಗೆ ತೆರಳಿ ಗ್ರಾಮ ಪಂಚಾಯತ್ ಮಟ್ಟದಲ್ಲೇ ಖಾತೆ, ಕಂದಾಯ ಸೇರಿದಂತೆ ಜನರ ಸಮಸ್ಯೆಗಳನ್ನು ಪರಿಹರಿಸಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕುಳಿತು ಸಮಸ್ಯೆ ಬಗೆಹರಿಸುವ ಬದಲು ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಕಂಡು ಸೂಕ್ತ ರೀತಿಯ ಪರಿಹಾರ ಒದಗಿಸಿ, ಗ್ರಾಮೀಣ ಮಟ್ಟದಲ್ಲಿ ಜನರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಆಗಬೇಕಿರುವ ಖಾತೆ, ಕಂದಾಯ, ವೃದ್ಧಾಪ್ಯ ವೇತನ, ವಿಡೊ ಪೆನ್ಶನ್ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದರು.

ಗ್ರಾಮೀಣ ಭಾಗದ ಜನರು ಹಣ ಖರ್ಚು ಮಾಡಿಕೊಂಡು ನಗರ ಪ್ರದೇಶಗಳಿಗೆ ಅಲೆಯುವುದು ಬೇಡ, ಅವರ ಏನೇ ಕೆಲಸಗಳಿದ್ದರೂ ಗ್ರಾಮಗಳಲ್ಲೇ ಪರಿಹರಿಸಿ, ಅಗತ್ಯವಿದ್ದರೆ ಮಾತ್ರ ನಗರ ಪ್ರದೇಶಗಳಿಗೆ ಬರಲಿ, ಜನರ ಸಮಸ್ಯೆಗಳನ್ನು ಗ್ರಾಮಮಟ್ಟದಲ್ಲೇ ಪರಿಹರಿಸಲು ವಿಫಲವಾದರೆ ಅಂತಹ ಅಧಿಕಾರಿಗಳನ್ನು ಬೇರೆಡೆಗೆ ಕಳುಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.

ಕುಡಿಯುವ ನೀರು, ದನ-ಕರುಗಳ ಮೇವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದು, ಕುಡಿಯುವ ನೀರಿಗೆ ಮತ್ತು ಮೇವು ಖರೀದಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ. ಎಲ್ಲಿ ನೀರಿಗೆ ಸಮಸ್ಯೆಯಾಗುತ್ತದೊ ಅಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರು ಕೊಡಿ, ಕೊಳವೆ ಬಾವಿಯಲ್ಲಿ ನೀರು ಬಾರದಿದ್ದರೆ ಟ್ಯಾಂಕರ್ ಗಳ ಮೂಲಕ ನೀರು ಕೊಡಿ ಎಂದು ಆದೇಶಿಸಿದರು.

ಸಭೆಯಲ್ಲಿ ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ.ಸಿಇಒ ಕೆ.ಜ್ಯೋತಿ, ಮೇಯರ್ ಪುಷ್ಪಲತಾ ಜಗನ್ನಾಥ್, ಮುಡಾ ಅಧ್ಯಕ್ಷ ವಿಜಯ್ ಕುಮಾರ್, ಜಿ.ಪಂ.ಅಧ್ಯಕ್ಷೆ ಪರಿಮಳ ಶ್ಯಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.