ಜನವರಿ 5ರಂದು ಮಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ ‘ನರೇಂದ್ರ ವಿಜಯ’ – ಯಕ್ಷರಂಗದಲ್ಲಿ ನಮೋ ಜೀವನದ ಯಶೋಗಾಥೆ -Vishwanews24
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಯಶೋಗಾಥೆಯೂ ಯಕ್ಷರಂಗಕ್ಕೆ ಸೇರ್ಪಡೆಯಾಗಿದೆ. ಈ ಮೂಲಕ ಯಕ್ಷರಂಗದ ಮೇಲೆಯೂ ನರೇಂದ್ರ ಮೋದಿ ವಿಜೃಂಭಿಸಲಿದ್ದಾರೆ.
ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಜನವರಿ 5ರಂದು ಸಂಜೆ 6.30ಕ್ಕೆ ‘ನರೇಂದ್ರ ವಿಜಯ’ ಯಕ್ಷಗಾನ ಕಥಾನಕ ಪ್ರದರ್ಶನಗೊಳ್ಳಲಿದೆ.
ನರೇಂದ್ರ ವಿಜಯ ಯಕ್ಷಗಾನ ಪ್ರಸಂಗವನ್ನು ಬರೆದಿರುವುದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಯಕ್ಷಗಾನ ಕಲಾವಿದೆ ಜ್ಯೋತಿ ಶಾಸ್ತ್ರಿ. ಗಾಯತ್ರಿ ಮಹಿಳಾ ಯಕ್ಷಗಾನ ತಂಡದ ಸ್ಥಾಪಕಿಯಾಗಿರುವ ಜ್ಯೋತಿ ಅವರ ನೇತೃತ್ವದಲ್ಲೇ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 2.30 ಗಂಟೆ ಅವಧಿಯ ಪ್ರಸಂಗ ಇದಾಗಿದ್ದು, 40 ಪುಟಗಳನ್ನು ಹೊಂದಿದೆ.
ನರೇಂದ್ರ ಮೋದಿ ಅವರ ಬಾಲ್ಯ, ಜೀವನ ಶೈಲಿ, ರಾಜಕೀಯ ಹಿನ್ನೆಲೆ ಸೇರಿ ಅವರ ಬದುಕಿನ ಹಲವು ಘಟ್ಟಗಳು ಪ್ರಸ್ತಾಪವಾಗಿವೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದು, ಪ್ರಧಾನಿಯಾದ ನಂತರ ಅವರು ಕೈಗೊಂಡ ಪ್ರಮುಖ ನಿರ್ಧಾರಗಳಾದ ಡಿಮಾನಿಟೈಸೇಶನ್, ಏರ್‌ಸ್ಟ್ರೈಕ್, ಬಾಲಾಕೋಟ್ ದಾಳಿ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮತ್ತಿತರ ವಿಷಯಗಳನ್ನು ಒಳಗೊಂಡಿದೆ.
ಮುಮ್ಮೇಳದಲ್ಲಿ ಜ್ಯೋತಿ ಶಾಸ್ತ್ರಿ, ವರದಾ ಐತಾಳ್, ಮಯೂರಿ ಉಪಾಧ್ಯಾಯ, ನಿರ್ಮಲಾ ಗೋಳಿಕೊಪ್ಪ, ಸವಿತಾ ಭಟ್, ಶ್ರಾರ್ವಣಿ ಭಟ್, ನಳಿನೀ ರಾವ್ ದಿಶಾ ಜೋಯಿಸ್, ಮಲ್ಲಿಕಾ ರಾಘವೇಂದ್ರ ಭಟ್ ಮೊದಲಾದವರು ಪಾತ್ರಧಾರಿಗಳಾಗಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ನಾಗೇಶ ಕುಲಾಲ್ ನಾಗರಕೊಡಿಗೆ, ಮದ್ದಳೆ ಎನ್.ಜಿ. ಹೆಗ್ಡೆ, ಚೆಂಡೆ ಕೃಷ್ಣಮೂರ್ತಿ, ವೇಷಭೂಷಣ ಎಂ.ಆರ್. ನಾಯಕ್ ಸಿದ್ದಾಪುರ ನಿರ್ವಹಿಸಲಿದ್ದಾರೆ.
