ಜಮ್ಮು ಕಾಶ್ಮೀರದ ಸರ್ಕಾರ ಪತನ : ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಮೈತ್ರಿಗೆ ಗುಡ್ ಬೈ ಹೇಳಿದ ಬಿಜೆಪಿ..

Featured, ಅಂತಾರಾಷ್ಟ್ರೀಯ ನ್ಯೂಸ್

ಜಮ್ಮು ಕಾಶ್ಮೀರದ ರಾಜ್ಯ ಸರ್ಕಾರ ಪತನವಾಗಿದೆ. ಭಾರತೀಯ ಜನತಾ ಪಕ್ಷ ಹಾಗೂ ಪಿಡಿಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿತ್ತು. ಆದರೆ ಭಾರತೀಯ ಜನತಾ ಪಕ್ಷ ಇದೀಗ ಪಿಡಿಪಿಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿದ್ದು, ಸರ್ಕಾರ ಪತನವಾಗಿದೆ. ಭಾರತೀಯ ಜನತಾ ಪಕ್ಷ ಬೆಂಬಲವನ್ನು ಹಿಂಪಡೆದ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬಾ ಮುಫ್ತಿ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸಂಜೆ ಪಿಡಿಪಿ ತುರ್ತು ಸಭೆ ಕರೆದಿದ್ದು ತನ್ನ ಮುಂದಿನ ರಾಜಕೀಯ ನಿಲುವನ್ನು ಪ್ರಕಟಿಸಲಿದೆ. ಮೂರು ವರ್ಷಗಳ ಹಿಂದೆ ನಡೆದಂತಹ ಚುನಾವಣೆಯಲ್ಲಿ ಪಿಡಿಪಿ ಗೆ ಭಾರತೀಯ ಜನತಾ ಪಕ್ಷ ಬೆಂಬಲ ಘೋಷಿಸಿ ಮೈತ್ರಿ ಸರ್ಕಾರವನ್ನು ರಚಿಸಿತ್ತು. ಆದರೆ ಇದೀಗ ಭಾರತೀಯ ಜನತಾ ಪಕ್ಷ ರಾಜ್ಯಪಾಲರಿಗೆ ಪತ್ರವನ್ನು ರವಾನಿಸಿದ್ದು, ಮೆಹಬೂಬಾ ಮುಫ್ತಿಯವರಿಗೆ ನೀಡಿದ್ದಂತಹ ಬೆಂಬಲವನ್ನು ಹಿಂಪಡೆದಿರುವುದಾಗಿ ಘೋಷಿಸಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಜಮ್ಮು ಕಾಶ್ಮೀರದ ಬಿಜೆಪಿ ಪ್ರತಿನಿಧಿ ರಾಮ ಮಾಧವ್ ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬೆಂಬಲ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಂತಹ ಸಭೆಯಲ್ಲಿ ಈ ನಿರ್ಧಾರ ಹೊರ ಬಿದ್ದಿದೆ ಎನ್ನಲಾಗಿದೆ .

ಪಿಡಿಪಿ ಜೊತೆ ಮೈತ್ರಿ ಮುಂದುವರಿಸುವುದು ಕಷ್ಟ ಸಾಧ್ಯವಾಗಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಪಿಡಿಪಿ ಸಹಕರಿಸುತ್ತಿಲ್ಲ. ಹಲವಾರು ಅಭಿವೃದ್ಧಿ ಕಾರ್ಯಗಳಿಗೂ ಕೂಡ ಸರ್ಕಾರದಲ್ಲಿರುವ ಸಚಿವರುಗಳೇ ಅಡ್ಡ ಗಳನ್ನು ಹಾಕುತ್ತಿದ್ದಾರೆ. ಸಚಿವರುಗಳ ಪ್ರತಿಯೊಂದು ನಿರ್ಧಾರಗಳಲ್ಲೂ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇಂದು ಜಮ್ಮು ಕಾಶ್ಮೀರದಲ್ಲಿ ಮೂಲಭೂತವಾದಿಗಳು ಹಾಗೂ ಭಯೋತ್ಪಾದಕರು ಅಟ್ಟಹಾಸ ಮೆರೆಯುತ್ತಿದ್ದಾರೆ ಇತ್ತೀಚೆಗೆ ನಡೆದಿದ್ದ ಪತ್ರಕರ್ತರ ಕೊಲೆಯೇ ಇದಕ್ಕೆ ಸಾಕ್ಷಿ ಎಂದು ರಾಮ ಮಾಧವ್ ತಿಳಿಸಿದ್ದಾರೆ.