ಜಾತಿ ರಾಜಕೀಯ : ಮುರಿಯುತ್ತ ಮೈತ್ರಿ ಸರ್ಕಾರ ??!!
ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಎಚ್.ಡಿ. ಕುಮಾರಸ್ವಾಮಿ ಸ್ವಾಮೀಜಿಗಳು ರಾಜಕಾರಣದಿಂದ ದೂರ ಇರಬೇಕು, ರಾಜಕಾರಣ ಮಾಡಲು ನಾವಿದ್ದೀವಿ ಎಂದು ಹೇಳಿದ್ದರು. ಆ ಮೂಲಕ ಹಲವು ಖಾವಿಧಾರಿಗಳಿಗೆ ಇರಿಸುಮುರುಸು ಉಂಟುಮಾಡುವ ಜತೆಗೆ, ಕೆಂಗಣ್ಣಿಗೂ ಗುರಿಯಾಗಿದ್ದರು. ಆದರೀಗ ಕುರುಬ ಮತ್ತು ಒಕ್ಕಲಿಗ ಸ್ವಾಮೀಜಿಗಳು ಬಹಿರಂಗವಾಗಿ ತೊಡೆ ತಟ್ಟಿದ್ದು, ಸರ್ಕಾರದ ಪತನಕ್ಕೆ ಮುನ್ಸೂಚನೆಯಾ ಎಂಬ ಪ್ರಶ್ನೆ ಕಾಡ ತೊಡಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಾಗಿನೆಲೆ ಸ್ವಾಮೀಜಿ ನಿರಂಜನಾನಂದ ಪುರಿ ಕಿಡಿ ಕಾರಿದ್ದಾರೆ. ಕುರುಬ ಸಮುದಾಯದ ಅಧಿಕಾರಿಗಳನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯದಲ್ಲಿ ಮೈತ್ರಿ ಸರ್ಕಾರ ಮಾಡುತ್ತಿದೆ ಎಂಬ ಆರೋಪವನ್ನು ಸ್ವಾಮೀಜಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರದ ಬೆಳ್ಳೂಡಿ ಕನಕಮಠದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸ್ವಾಮೀಜಿಗಳು ಕುಮಾರಸ್ವಾಮಿ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರನ್ನು ಮೈತ್ರಿ ಸರ್ಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಕಾರಣವೂ ಇರಬಹುದು ಎನ್ನಲಾಗುತ್ತಿದೆ.
ಮೈತ್ರಿ ಸರ್ಕಾರ ಬಂದ ಬಳಿಕ ಕುರುಬ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಒಂದು ಜಾತಿಯ ಅಧಿಕಾರಿಗಳ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ ಎಂದು ಕಾಗಿನೆಲೆ ಸ್ವಾಮೀಜಿ ಆರೋಪಿಸಿದರು. ಕುರುಬ ಅಧಿಕಾರಿಗಳನ್ನು ಮನಬಂದಂತೆ ವರ್ಗಾವಣೆ ಮಾಡಲಾಗುತ್ತಿದೆ, ಈ ಕಾರ್ಯವನ್ನು ಕೈ ಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿಯೂ ಅವರು ತಿಳಿಸಿದರು.
