ಜಿಲ್ಲೆಯಲ್ಲಿ ಆರಂಭಗೊಂಡ ಬಿರುಸಿನ ಮತದಾನ
ಉಡುಪಿ: ಇಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಉಡುಪಿ ನಗರಸಭೆ, ಕಾರ್ಕಳ ಪುರಸಭೆ, ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ ಮತದಾರರು ಮತಗಟ್ಟೆಗೆ ಬರಲು ಆರಂಭಿಸಿದ್ದು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸ್ವಪತ್ನಿ ಜೊತೆ ಉಡುಪಿಯ ಅಜ್ಜರಕಾಡಿನ ಮಹಿಳಾ ಕಾಲೇಜಿನಲ್ಲಿ ಮತದಾನ ಮಾತದಾನ ಮಾಡಿದ್ದಾರೆ.
ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 160 ವಾರ್ಡ್ ಗಳಿದ್ದು, 261 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 35 ವಾರ್ಡ್ ಗಳಾದರೆ, ಕಾರ್ಕಳ 23, ಕಾಪು 23 ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ 16 ವಾರ್ಡ್ ಗಳಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ನಡೆಸುತ್ತಿದ್ದು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದರೂ ತಮ್ಮ ಅಸ್ಥಿತ್ವವನ್ನು ಕಾಂಗ್ರೆಸ್ ಉಳಿಸಿಕೊಳ್ಳುತ್ತಾ ಎಂಬುದು ಕುತೂಹಲ ಮೂಡಿಸಿದೆ. ಅಳಿವು ಉಳಿವಿನ ನಡುವೆ ನಡೆಯುವ ಈ ಚುನಾವಣೆ ಪ್ರಕ್ರಿಯೆ ಸಂಜೆ ಐದು ಗಂಟೆಗೆ ಮುಗಿಯಲಿದೆ. ಸೆ. 3 ರಂದು ಎಲ್ಲಾ 261 ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.
