ಜುಲೈ 31 ರೊಳಗೆ ಆಧಾರ್ ದೃಡೀಕರಣ (ಇ-ಕೆವೈಸಿ) ಮಾಡಿಸದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್ -Vishwanews24
ಬೆಂಗಳೂರು:ಜುಲೈ 31 ರೊಳಗೆ ರೇಷನ್ ಕಾರ್ಡ್ ಅನ್ನು ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ಪಡಿತರ ಸಿಗುವುದಿಲ್ಲ.
ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬರು ಜುಲೈ 31 ರೊಳಗೆ ಆಧಾರ್ ದೃಡೀಕರಣ(ಇ-ಕೆವೈಸಿ) ಮಾಡಿಸಬೇಕಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ತಮ್ಮ ಇ-ಕೆವೈಸಿ ಮಾಡಿಸಬೇಕಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಯಾರು ಹಣ ಪಾವತಿಸುವಂತಿಲ್ಲ. ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು. ತಾವು ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ ದೃಢೀಕರಣದೊಂದಿಗೆ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.
ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ಬಯೊಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ. ಬಯೋಮೆಟ್ರಿಕ್ ನೀಡಿದವರಿಗೆ ಮಾತ್ರ ಪಡಿತರವನ್ನು ವಿತರಿಸಲಾಗುತ್ತದೆ ಎಂದು ಹೇಳಲಾಗಿದೆ.
ಜುಲೈ 31 ರೊಳಗೆ ಬಿಪಿಎಲ್, ಎಪಿಎಲ್, ಅಂತ್ಯೋದಯ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲರೂ ನ್ಯಾಯಬೆಲೆ ಅಂಗಡಿಗೆ ಹೋಗಿ ದೃಢೀಕರಣ ನೀಡಬೇಕಿದೆ. ಕೆವೈಸಿ ಪ್ರಕ್ರಿಯೆ ಮುಗಿದ ಬಳಿಕ ಪಡಿತರ ಚೀಟಿಯಿಂದ ತೆಗೆದುಹಾಕಲು ಉಳಿದವರಿಗೆ ಮಾತ್ರ ಪಡಿತರ ವಿತರಿಸಲಾಗುವುದು.
ಇ-ಕೆವೈಸಿ ಯಾಕೆ ಬೇಕು?
ಹಲವು ವರ್ಷಗಳ ಹಿಂದೆಯೇ ಪಡಿತರ ಸದಸ್ಯರ ಆಧಾರ್ ನಂಬರ್ ಲಿಂಕ್ ಮಾಡಲಾಗಿದೆ. ಇದರ ಆಧಾರದ ಮೇಲೆ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ. ಆದರೆ, ಮೃತರ, ಪರಸ್ಥಳದಲ್ಲಿ ನೆಲೆಸಿದವರ, ಮದುವೆಯಾಗಿ ಗಂಡನ ಮನೆಗೆ ತೆರಳಿದವರ ಹೀಗೆ ನಾನಾ ರೀತಿಯಲ್ಲಿ ಊರಲ್ಲಿ ಇಲ್ಲದವರ ಹೆಸರುಗಳನ್ನು ಕಾರ್ಡಿನಿಂದ ತೆಗೆದು ಹಾಕಿಲ್ಲ. ಈ ಕಾರಣಕ್ಕೆ ಅವರ ಹೆಸರಿನಲ್ಲಿ ಆಹಾರ ಸರಬರಾಜಾಗುತ್ತಿದ್ದು, ಸರಕಾರಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಕಾರ್ಡ್ನ ಪ್ರತಿ ಸದಸ್ಯರ ಬೆರಳಚ್ಚು (ಬಯೋಮೆಟ್ರಿಕ್)ಪಡೆಯಲಾಗುತ್ತಿದೆ. ಕಾರ್ಡ್ನಲ್ಲಿ ಹೆಸರಿರುವ ಎಷ್ಟು ಸದಸ್ಯರು ಬೆರಳಚ್ಚು ಕೊಡುತ್ತಾರೋ ಅವರಿಗೆ ಮಾತ್ರ ರೇಷನ್ ಕೊಡಲಾಗುತ್ತದೆ.
ಇ-ಕೆವೈಸಿ ಅಪ್ಡೇಟ್ ವ್ಯವಸ್ಥೆಯು ಒಂದು ಬಾರಿ ಮಾತ್ರ ನಡೆಯಲಿದ್ದು, ಎಲ್ಲ ಸದಸ್ಯರು ಬೆರಳಚ್ಚು ನೀಡಿದ ಬಳಿಕ ಎಂದಿನಂತೆ ಪ್ರತಿ ತಿಂಗಳು ಕುಟುಂಬದ ಯಾವುದೇ ಒಬ್ಬ ಸದಸ್ಯ ಬಂದು ಪಡಿತರ ಪಡೆಯಬಹುದಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
