ಜೆಡಿಎಸ್ ಪಕ್ಷದ ಬಾಹ್ಯ ಬೆಂಬಲ ಬೇಕಿಲ್ಲ ; ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ನಡೆಸಲಿದೆ : ಶೋಭಾ ಕರಂದ್ಲಾಜೆ, -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಸೋಮವಾರ ಬಹುಮತ ಸಾಬೀತುಪಡಿಸಲು ಮುಂದಾಗಿದ್ದಾರೆ.

ಜೆಡಿಎಸ್ ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಬೇಕೆಂದು ಪಕ್ಷದ ನಾಯಕರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಸೋಮವಾರ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಿದ್ದಾರೆ. ಸ್ವತಂತ್ರ ಸರ್ಕಾರ ರಚಿಸುವುದು ಬಿಜೆಪಿಯ ಆದ್ಯತೆಯಾಗಿದೆ. ಜೆಡಿಎಸ್ ಪಕ್ಷದ ಬಾಹ್ಯ ಬೆಂಬಲ ಬೇಕಿಲ್ಲ, ಅದರ ಅವಶ್ಯಕತೆಯೂ ಬಿಜೆಪಿಗೆ ಇಲ್ಲ ಎಂದು ತಿಳಿಸಿದ್ದಾರೆ.

“ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ನಡೆಸಲಿದೆ. ಅಲ್ಲದೆ, ಸ್ವಾತಂತ್ರ್ಯವಾಗಿ ಸರ್ಕಾರ ಮಾಡಬೇಕು ಅನ್ನೋದು ಭಾರತೀಯ ಜನತಾ ಪಾರ್ಟಿಯ ಇಚ್ಚೆ . ಈಗಾಗಲೇ ಪಕ್ಷದಲ್ಲಿ 105 ಶಾಸಕರಿದ್ದಾರೆ. ಇಬ್ಬರು ಪಕ್ಷೇತರರು ನಮ್ಮನ್ನು ಬೆಂಬಲಿಸಿದ್ದಾರೆ. ಅಲ್ಲದೆ, ಉಳಿದ ಅತೃಪ್ತರ ರಾಜೀನಾಮೆ ಅಂಗೀಕಾರವಾದರೆ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ.

ರಾಜ್ಯದಲ್ಲಿ ಯಾವ ಸಂದರ್ಭದಲ್ಲಿ ಉಪ ಚುನಾವಣೆ ನಡೆದರೂ ಜನ ನಮ್ಮನ್ನು ಬೆಂಬಲಿಸುತ್ತಾರೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಲು ಮತದಾರರು ಅವಕಾಶ ಮಾಡಿಕೊಡುತ್ತಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ 221 ಸಂಖ್ಯಾಬಲವಿದೆ. ಮ್ಯಾಜಿಕ್ ನಂಬರ್ 111 ಆಗಿದ್ದು, 105 ಶಾಸಕರನ್ನು ಹೊಂದಿರುವ ಬಿಜೆಪಿ ಒಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 106 ಸಂಖ್ಯಾಬಲ ಹೊಂದಿದೆ. ರಾಜಿನಾಮೆ ನೀಡಿರುವ ಶಾಸಕರು ಗೈರು ಹಾಜರಾದರೆ ಬಿಜೆಪಿ ಸುಲಭವಾಗಿ ಬಹುಮತ ಸಾಬೀತುಪಡಿಸಲಿದೆ ಎಂದು ಹೇಳಲಾಗಿದೆ.