ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ವಿಶ್ವಕಪ್ ತಂಡದಿಂದ ನಿರ್ಗಮನ -Vishwanews24
ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು ಅವರು ಚೇತರಿಸಿಕೊಳ್ಳದ ಕಾರಣ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶಿಖರ್ ಧವನ್ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಆದರೆ ಅವರನ್ನು ಸ್ವದೇಶಕ್ಕೆ ಕಳಿಸದೇ ಲಂಡನ್ ನಲ್ಲೇ ಉಳಿಸಿಕೊಂಡು ಬಿಸಿಸಿಐ ವೈದ್ಯಕೀಯ ತಂಡವು ಒಂದು ವಾರದ ನಿಗಾ ವಹಿಸಲು ನಿರ್ಧರಿಸಿತ್ತು.
ಆದರೆ ಶಿಖರ್ ಧವನ್ ಗುಣಮುಖರಾಗಲು ಕನಿಷ್ಠ ಇನ್ನು ಮೂರು ವಾರ ಬೇಕಿದೆ ಎಂಬ ವರದಿಗಳು ಬಂದಿದ್ದವು. ಸದ್ಯ ನಿಗದಿತ ಅವಧಿಯೊಳಗೆ ಧವನ್ ಚೇತರಿಕೆ ಅಸಾಧ್ಯ ಎಂಬುದು ಕಂಡು ಬಂದ ಹಿನ್ನಲೆಯಲ್ಲಿ ವಿಶ್ವಕಪ್ ತಂಡದಿಂದ ನಿರ್ಗಮಿಸಬೇಕಾಗಿದೆ.
‘2019ರ ವಿಶ್ವಕಪ್ ತಂಡದ ಭಾಗವಾಗಿರುವುದಿಲ್ಲ ಎಂದು ಹೇಳಲು ಬೇಸರವಾಗುತ್ತಿದೆ. ದೌರ್ಭಾಗ್ಯವಶಾತ್, ನನ್ನ ಹೆಬ್ಬೆರಳ ಗಾಯ ನಿಗದಿತ ಸಮಯದಲ್ಲಿ ಗುಣವಾಗಿಲ್ಲ. ನಿಜವಾಗಿಯೂ ನನ್ನ ದೇಶಕ್ಕಾಗಿ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂಬ ಬಯಕೆ ನನ್ನದಾಗಿತ್ತು. ಇದೀಗ ತಂಡದಿಂದ ಹೊರಗುಳಿದು ಗುಣಮುಖನಾಗುವುದರತ್ತ ಮತ್ತು ಮುಂದಿನ ಟೂರ್ನಿಗಳತ್ತ ಗಮನಹರಿಸಬೇಕಿದೆ. ಭಾರತ ತಂಡದ ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಅವರು ವಿಶ್ವಕಪ್ ಗೆಲ್ಲಲಿದ್ದಾರೆ. ನಮಗಾಗಿ ಪ್ರಾರ್ಥಿಸುತ್ತಿರಿ, ನಮ್ಮನ್ನು ಬೆಂಬಲಿಸುತ್ತಿರಿ. ಸಹ ಆಟಗಾರರು ನೀಡಿದ ಬೆಂಬಲ ಮತ್ತು ಪ್ರೀತಿಗೆ ಋಣಿ. ಹಾಗೆಯೇ ನಿಮ್ಮ ಸಪೋರ್ಟ್ ಮತ್ತು ಪ್ರಾರ್ಥನೆ ನಮಗೆ ತುಂಬಾ ಮುಖ್ಯವಾದದ್ದು. ಅದಕ್ಕಾಗಿ ಧನ್ಯವಾದಗಳು. ಜೈ ಹಿಂದ್!’ ಎಂದು ಧವನ್ ಟ್ವೀಟ್ ಮಾಡಿದ್ದಾರೆ. ಜತೆಗೆ, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೊವನ್ನೂ ಪೋಸ್ಟ್ ಮಾಡಿದ್ದಾರೆ.
ಶಿಖರ್ ಧವನ್ ಬದಲಿಗೆ ರಿಷಬ್ ಪಂತ್ ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಧವನ್ ಬದಲಿಗೆ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.
