ಟೀಕಿಸುತ್ತಾರೆ ಎಂಬ ಕಾರಣಕ್ಕೆ ಒಳ್ಳೆಯ ಕೆಲಸದಿಂದ ವಿಮುಖರಾಗಬಾರದು : ಪಟ್ಲ ಸತೀಶ ಶೆಟ್ಟಿ -Vishwanews24
ಮಂಗಳೂರು: ಸತ್ಕಾರ್ಯ ಮಾಡಿದಾಗ ಟೀಕೆ ಇದ್ದೇ ಇರುತ್ತದೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಎಂದು ಮೇರು ಭಾಗವತ ಪಟ್ಲ ಸತೀಶ ಶೆಟ್ಟಿ ಹೇಳಿದರು.
ಕದ್ರಿ ರಾಜಾಂಗಣದಲ್ಲಿ ನಡೆದ ಬಾಲ ಯಕ್ಷಕೂಟ ಏಕಾದಶ ಸಂಭ್ರಮದಲ್ಲಿ ಕದ್ರಿ ಯಕ್ಷ ಸಮ್ಮಾನ” ಪ್ರಶಸ್ತಿಯನ್ನು ಹಿರಿಯ ಕಲಾವಿದ, ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ಯಾವುದೇ ಸತ್ಕಾರ್ಯ ಮಾಡದೆ ಉಳಿದರೆ ಯಾರೂ ಟೀಕೆ ಮಾಡುವುದಿಲ್ಲ. ಆದ್ದರಿಂದ ಟೀಕಿಸುತ್ತಾರೆ ಎಂಬ ಕಾರಣಕ್ಕೆ ಒಳ್ಳೆಯ ಕೆಲಸದಿಂದ ವಿಮುಖರಾಗಬಾರದು ಎಂದು ಹೇಳಿದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಯುವಜನತೆಗೆ ಯಕ್ಷಗಾನ ಕಲಿಸುವ ಮೂಲಕ ಬಾಲ ಯಕ್ಷಕೂಟ ಮಾದರಿಯಾಗಿದೆ ಎಂದರು.
ತುಳು ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಪದಾಧಿಕಾರಿಗಳಾದ ದಿನೇಶ್ ದೇವಾಡಿಗ ಕದ್ರಿ, ವನಿತಾ ರಾಮಚಂದ್ರ ಎಲ್ಲೂರು, ಆರ್.ಕೆ. ರಾವ್, ಕುಂಜತ್ತೋಡಿ ವಾಸುದೇವ ಭಟ್, ಕೃಷ್ಣರಾಜ ನಂದಳಿಕೆ ಉಪಸ್ಥಿತರಿದ್ದರು. ಸಂಚಾಲಕ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಸ್ವಾಗತಿಸಿದರು. ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಕೆ.ಕೃಷ್ಣ ಭಟ್ ವಂದಿಸಿದರು. ರಿಶಿಕಾ ಕುಂದೇಶ್ವರ ಪ್ರಾರ್ಥಿಸಿದರು.
ಇದೇ ವೇಳೆ ಪ್ರಸಿದ್ಧ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರ ನೇತೃತ್ವದಲ್ಲಿ ಹಾಸ್ಯ ಸಿಂಚನ ನಡೆಯಿತು. ಭಾಗವತ ದಯಾನಂದ ಕೋಡಿಕಲ್ ಸಾರಥ್ಯದಲ್ಲಿ ಮಹಿಳಾ ಯಕ್ಷಕೂಟದಿಂದ ಮೇದಿನಿ ನಿರ್ಮಾಣ, ಮಹಿಷ ವಧೆ ಯಕ್ಷಗಾನ ನಡೆಯಿತು.
