ಡಿಸೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ಶಾಲೆ ಆರಂಭ ಇಲ್ಲ: ಸಿಎಂ ಯಡಿಯೂರಪ್ಪ -Vishwanews24
ಡಿಸೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ಶಾಲೆ ಆರಂಭ ಇಲ್ಲ: ಸಿಎಂ ಯಡಿಯೂರಪ್ಪ -Vishwanews24
ಬೆಂಗಳೂರು: ಡಿಸೆಂಬರ್‌ವರೆಗೆ ಶಾಲೆ ಇಲ್ಲ. ಡಿಸೆಂಬರ್ ಕೊನೆಯಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಶಾಲಾ-ಕಾಲೇಜು ಪ್ರಾರಂಭ ಕುರಿತು ಸಿಎಂ ನೇತೃತ್ವದಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ಸದ್ಯಕ್ಕೆ ಶಾಲೆ ಪ್ರಾರಂಭ ಬೇಡ ಎಂದು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಸಿಎಂ ಅಧಿಕೃತವಾಗಿ ಘೋಷಿಸಿದ್ದಾರೆ.
ಸಭೆ ಪ್ರಾರಂಭದಲ್ಲಿ ಡಿಗ್ರಿ ಕಾಲೇಜುಗಳ ಬಗ್ಗೆ ಚರ್ಚೆ ನಡೆಯಿತು. ಎಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಿದ್ದಾರೆ. ಟೆಸ್ಟ್ ಮಾಡಿಸಿದಾಗ ಎಷ್ಟು ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಅನ್ನೋದ್ರ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ವರದಿಯನ್ನು ಸಚಿವ ಸುರೇಶ್ ಕುಮಾರ್ ಸಿಎಂಗೆ ಸಲ್ಲಿಕೆ ಮಾಡಿದರು. ಶಾಲೆ ಪ್ರಾರಂಭ ಕುರಿತು ವರದಿಯನ್ನು ಆಯುಕ್ತ ಅನ್ಬುಕುಮಾರ್ ರೆಡಿ ಮಾಡಿದ್ದರು. ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಿಎಸ್ ವಿಜಯ್ ಭಾಸ್ಕರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಹೈದ್ರಾಬಾದ್ ನಲ್ಲಿರುವ ಆರೋಗ್ಯ ಸಚಿವ ಡಾ.ಸುಧಾಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.
