ಡಿ.ಕೆ.ಶಿವಕುಮಾರ್ ಅವರ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಕೀಯ ಮಾಡುತ್ತಿಲ್ಲ : ಡಿ.ವಿ.ಸದಾನಂದ ಗೌಡ -Vishwanews24
ಮಂಡ್ಯ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಹಣ ಸಂಗ್ರಹಣೆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಇದು ನಿನ್ನೆ ಮೊನ್ನೆಯದಲ್ಲ, ಹಲವು ದಿನಗಳಿಂದಲೂ ನಡೆಯುತ್ತಿದೆ. ಕಾನೂನು ಏನಿದೆಯೋ ಅದರ ಅನ್ವಯವೇ ಪ್ರಕರಣದ ವಿಚಾರಣೆ ನಡೆಯುತ್ತದೆ. ಇವರು ಅಂತಲ್ಲ, ದೇಶದಲ್ಲಿ ಯಾರೇ ಅಕ್ರಮವಾಗಿ ಹಣ ಸಂಪಾದಿಸಿದರೂ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಕೋರ್ಟ್ ಡಿಕೆಶಿ ಅವರ ಅರ್ಜಿ ವಜಾ ಮಾಡಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಎದುರು ಹಾಜರಾಗಿದ್ದಾರೆ. ಇದನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.
ಸರ್ಕಾರ ರಚನೆಯಾದಾಗ ಸಚಿವ ಸ್ಥಾನ ಸಿಗಬೇಕೆಂಬ ಆಕಾಂಕ್ಷಿಗಳು ಸಹಜವಾಗಿ ಇರುತ್ತಾರೆ. ಆದರೆ, ಹಿರಿಯ ನಾಯಕರು ಅಳೆದು-ತೂಗಿ ಯಾರಿಗೆ ಯಾವ ಸ್ಥಾನ ನೀಡಬೇಕು ಎಂದು ನಿರ್ಧರಿಸುತ್ತಾರೆ. ನಿರಾಸೆಯಾದವರಿಗೆ ಸ್ವಲ್ಪ ದಿನ ಹಾರ್ಟ್ ಬರ್ನಿಂಗ್ ಆಗುತ್ತದೆ. ಬೇಸರವಾಗುತ್ತದೆ ಎಂದು ಹೇಳಿದರು.
ಸಚಿವ ಸಿ.ಎಸ್.ಪುಟ್ಟರಾಜು ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ ಅವರು, ನಮ್ಮೊಟ್ಟಿಗೆ ಬರುತ್ತೇವೆ ಎನ್ನುವವರನ್ನು ಪಕ್ಷ ಖಂಡಿತ ಸೇರಿಸಿಕೊಳ್ಳುತ್ತದೆ. ನರೇಂದ್ರ ಮೋದಿ ಮಾರ್ಗದರ್ಶನ ಹಾಗೂ ಅಮಿತ್ ಷಾ ಸಂಘಟನೆಯಲ್ಲಿ ಮುನ್ನಡೆಯುತ್ತೇವೆ. ಯಾರೇ ಪಕ್ಷಕ್ಕೆ ಬಂದರೂ ಸೇರಿಸಿಕೊಳ್ಳುತ್ತೇವೆ ಎಂದರು.
