ಡ್ರಗ್ಸ್ ಮಾಫಿಯಾ : ನನ್ನ ವಿರುದ್ಧ ತನಿಖೆ ನಡೆಸಿ, ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ ಸರ್ಕಾರಕ್ಕೇ ಬರೆದುಕೊಡುವೆ :ಜಮೀರ್ ಸವಾಲ್ -Vishwanews24
ಡ್ರಗ್ಸ್ ಮಾಫಿಯಾ : ನನ್ನ ವಿರುದ್ಧ ತನಿಖೆ ನಡೆಸಿ, ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ
ಸರ್ಕಾರಕ್ಕೇ ಬರೆದುಕೊಡುವೆ : ಸರ್ಕಾರಕ್ಕೆ ಜಮೀರ್ ಸವಾಲ್ -Vishwanews24
ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ತನ್ನ ಹೆಸರನ್ನು ಪ್ರಸ್ತಾಪಿಸಿರುವ ಪ್ರಶಾಂತ್ ಸಂಬರಗಿ ಯಾರೆಂದು ನನಗೆ ಗೊತ್ತೇ ಇಲ್ಲ ಎಂದಿರುವ ಶಾಸಕ ಜಮೀರ್ ಅಹ್ಮದ್, ಡ್ರಗ್ಸ್ ಕೇಸ್ನಲ್ಲಿ ನನ್ನ ಕೈವಾಡ ಇರುವುದು ಸಾಬೀತು ಮಾಡಲಿ. ಒಂದು ವೇಳೆ ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ ಸರ್ಕಾರಕ್ಕೇ ಬರೆದುಕೊಡುವೆ ಎಂದು ಸವಾಲು ಹಾಕಿದ್ದಾರೆ.
ಶೇಖ್ ಫಾಸಿಲ್ ಫಜೀಲ್ ನನಗೆ ಗೊತ್ತು. ಆತ ನಾಲ್ಕು ವರ್ಷಗಳಿಂದ ನನ್ನ ಜತೆ ಇಲ್ಲ. ಯಾರೋ ಒಬ್ಬರು ನನ್ನ ಜತೆ ನಿಂತು ಫೋಟೋ ತೆಗೆಸಿಕೊಂಡಾಕ್ಷಣ ಅವರು ಮಾಡಿದ ಕೆಲಸಕ್ಕೆಲ್ಲ ನಾನು ಜವಾಬ್ದಾರನಲ್ಲ. ಇನ್ನು ಸಂಜನಾ ಯಾರೆಂದು ಗೊತ್ತಿಲ್ಲ. ನೇರವಾಗಿ ಅವರನ್ನೂ ಭೇಟಿಯಾಗಿಲ್ಲ. ಅಂದ ಮೇಲೆ ಶ್ರೀಲಂಕಾಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ತನಿಖೆ ಮಾಡ್ಲಿ.. ಫಾಸಿಲ್ನ ಫೋನ್ ಕಾಲ್ ರೆಕಾರ್ಡ್ ತೆಗೆಸಲಿ. ತನಿಖೆ ನಡೆಸಲಿ, ಸಂಪೂರ್ಣ ಸಹಕಾರ ಕೊಡ್ತೀನಿ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಸೂಕ್ತ ತನಿಖೆ ಮಾಡಲಿ ಎಂದು ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ಪೊಲೀಸರು ನಡೆಸುವ ತನಿಖೆಯಲ್ಲಿ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಕಂಡುಬಂದರೆ ಆರೋಪಿಗಳನ್ನು ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ. 5/6
— B Z Zameer Ahmed Khan (@BZZameerAhmedK) September 11, 2020
ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ನಾನೇನೋ ಪ್ರಭಾವ ಬೀರುತ್ತಿದ್ದೆ ಎಂದು ಹೇಳಬಹುದಿತ್ತು. ಈಗ ನಟಿ ಸಂಜನಾ ಪೊಲೀಸರ ವಶದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಿ. ಅದೇ ರೀತಿ ಶ್ರೀಲಂಕಾ ಪ್ರವಾಸದ ಬಗ್ಗೆಯೂ ತನಿಖೆ ನಡೆಸಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಹಿಂದೆ ಜಮೀರ್ ಅಹ್ಮದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶೇಖ್ ಫಾಸಿಲ್, ಶಾಸಕರ ಜತೆ ತೆಗೆಸಿಕೊಂಡಿದ್ದ ಫೋಟೋಗಳು ಇದೀಗ ವೈರಲ್ ಆಗಿವೆ. ಅಲ್ಲದೆ ಶ್ರೀಲಂಕಾದ ಕ್ಯಾಸಿನೋಗೆ ಜಮೀರ್ ಅಹ್ಮದ್ ಕೂಡ ಹೋಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದರು. ಈ ಬಗ್ಗೆ ದಾಖಲೆಗಳು ಬೇಕಿದ್ರೆ ನೀಡ್ತೇನೆ ಎಂದಿದ್ದರು. ಈ ಆರೋಪ ಮಾಡಿದ ಪ್ರಶಾಂತ್ ಸಂಬರಗಿ ವಿರುದ್ಧ ಜಮೀರ್ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಡ್ರಗ್ಸ್ ಮಾಫಿಯಾದಲ್ಲಿ ನನ್ನ ಕೈವಾಡ ಇರುವುದು ಸಾಬೀತಾದ್ರೆ ತನ್ನೆಲ್ಲ ಆಸ್ತಿಯನ್ನೇ ಕೊಡುವುದಾಗಿ ಸವಾಲು ಹಾಕಿದ್ದಾರೆ.
