ತಿರುಪತಿ ದೇವಸ್ಥಾನದ ಪುರೋಹಿತನ ಮನೆ ಮೇಲೆ ಐಟಿ ದಾಳಿ : ಇಲ್ಲಿದೆ ವೈರಲ್ ಸುದ್ದಿಯ ಹಿಂದಿರುವ ಅಸಲಿಯತ್ತು – Vishwanews24
ತಿರುಪತಿ ದೇವಸ್ಥಾನದ ಪುರೋಹಿತನ ಮನೆ ಮೇಲೆ ಐಟಿ ದಾಳಿ : ಇಲ್ಲಿದೆ ವೈರಲ್ ಸುದ್ದಿಯ ಹಿಂದಿರುವ ಅಸಲಿಯತ್ತು – Vishwanews24
ತಿರುಮಲ: ತಿರುಮಲ ತಿರುಪತಿಯ ವೆಂಕಟೇಶ್ವರ ದೇವಾಲಯದ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ಮನೆಯಲ್ಲಿ ಅಪಾರ ನಗದು, ಚಿನ್ನ, ವಜ್ರಾಭರಣಗಳು ಪತ್ತೆಯಾಗಿರುವ ಸುದ್ದಿ ಹರಿದಾಡುತ್ತಿದೆ.
ಮಾಹಿತಿ ಪ್ರಕಾರ, ‘ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 128 ಕೆ.ಜಿ ಚಿನ್ನ, 150 ಕೋಟಿ ರೂಪಾಯಿ ನಗದು, 70 ಕೋಟಿ ರೂಪಾಯಿ ಬೆಲೆಯ ವಜ್ರ ಸಿಕ್ಕಿದೆ ಎಂದಿದೆ. ಇದರ ಸತ್ಯಾಸತ್ಯತೆಯನ್ನು ಅರಿಯದೇ ಇನ್ನುಮುಂದೆ ಯಾರೂ ತಿರುಪತಿಗೆ ಕಾಣಿಕೆ ಸಲ್ಲಿಸಬೇಡಿ ಎಂದೂ ಅದರಲ್ಲಿ ಬರೆಯಲಾಗಿದೆ. ಯೂಟ್ಯೂಬ್ನಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದೆ.
ಆದರೆ ನಿಜವಾಗಿಯೂ ಹೀಗೆ ರೇಡ್ ಆಗಿದ್ದು ಹೌದಾ? ಇಷ್ಟು ಬೆಲೆಬಾಳುವ ಆಭರಣ, ನಗದು ಪುರೋಹಿತನ ಮನೆಯಲ್ಲಿ ಸಿಕ್ಕಿದ್ದು ನಿಜನಾ ಎಂಬ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿದಾಗ ಸಿಕ್ಕಿದ್ದೇ ಬೇರೆ ವಿಷಯ. ಅದೇನೆಂದರೆ ಇದು ಸುಳ್ಳು ಸುದ್ದಿ. ಯಾವುದೇ ಪುರೋಹಿತನ ಮನೆಯಲ್ಲಿ ದಾಳಿಯೂ ಆಗಲಿಲ್ಲ, ಇವೆಲ್ಲಾ ಸಿಕ್ಕಿಯೂ ಇಲ್ಲ.
ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ದಿನೇಶ್ ಮೊಂಗಿಯಾ ಬಿಜೆಪಿ ಸೇರ್ಪಡೆ – Vishwanews24
ಅಸಲಿಗೆ ಈ ವಿಡಿಯೋ ತಮಿಳುನಾಡಿನಲ್ಲಿ ನಡೆದ ಚಿನ್ನಾಭರಣಗಳ ಅಂಗಡಿಯ ದರೋಡೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ನಗದು, ಚಿನ್ನಾಭರಣಗಳದ್ದಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಇರುವ ಜೋಸ್ ಅಲುಕ್ಕಾಸ್ ಷೋರೂಂನಲ್ಲಿ ಡಿ.14ರಂದು ನಡೆದಿದ್ದ ದರೋಡೆಗೆ ಸಂಬಂಧಿಸಿದಂತೆ ಆರೋಪಿಗಳಿಂದ ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರ ವರದಿಯನ್ನು ತಮಿಳುನಾಡಿನ ಟೀವಿ ಚಾನೆಲ್ ಗಳಲ್ಲಿ ಇದೇ ಡಿಸೆಂಬರ್ 22ರಂದು ಪ್ರಸಾರವಾಗಿತ್ತು.
ಆರೋಪಿಗಳು ಸ್ಮಶಾನದಲ್ಲಿ ಹೂತಿಟ್ಟಿದ್ದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಡೀಕಾರಾಮನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ. ಈ ವಿಡಿಯೋದಲ್ಲಿ ವಶಪಡಿಸಿಕೊಂಡಿರುವ 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ಪೊಲೀಸರು ಪ್ರದರ್ಶಿಸುತ್ತಿದ್ದಾರೆ. ಆದರೆ ಇದೇ ವಿಡಿಯೋ ಇಟ್ಟುಕೊಂಡು ತಿರುಪತಿಯ ಪುರೋಹಿತರ ಮನೆಯಲ್ಲಿ ನಡೆದ ದಾಳಿ ಎಂಬ ಸುದ್ದಿ ಹರಿಬಿಡಲಾಗಿದೆ.
