ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತಗಲಿ ಇಬ್ಬರ ಸಾವು

Featured, ಉಡುಪಿ

ಮಲ್ಪೆ: ಪಡುತೋನ್ಸೆ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರವಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿ ಇಬ್ಬರು ಯುವಕರು ಬುಧವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಳಿಗರ ಕುದ್ರುವಿನ ಸಂಜೀವ ಬೆಲ್ಚಡ ಅವರ ಪುತ್ರ, ತೆಂಗಿನಕಾಯಿ ಕೀಳುವ ವೃತ್ತಿಯ ರಾಕೇಶ್‌ (22) ಮತ್ತು ಪಡುಕುದ್ರು ಬಳಿಯ ಕೃಷ್ಣ ಕಾಂಚನ್‌ ಅವರ ಪುತ್ರ, ತೆಂಕನಿಡಿಯುರು ಪ್ರ.ದ. ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿ ಕೀರ್ತನ್‌ (21) ಮೃತಪಟ್ಟವರು.

ಮೀನು ಹಿಡಿಯಲು ಹೋಗಿದ್ದರು
ಸ್ನೇಹಿತರಾಗಿದ್ದ ಇಬ್ಬರೂ ಸಂಜೆ ವೇಳೆ ಫರಂಗಿಕುದ್ರವಿಗೆ ಮೀನು ಹಿಡಿಯಲು ಹೋಗಿದ್ದರು. ನಿರ್ಜನ ಪ್ರದೇಶದಲ್ಲಿ ಹುಲ್ಲಿನ ಮೇಲೆ ಬಿದ್ದ ವಿದ್ಯುತ್‌ ತಂತಿಯನ್ನು ಸರಿಸಲು ಹೋದಾಗ ಅದರಲ್ಲಿ ವಿದ್ಯುತ್‌ ಪ್ರವಹಿಸಿತು. ಆಕ್ರಂದನ ಕೇಳಿ ಮೀನು ಹಿಡಿಯುತ್ತಿದ್ದ ಮೀನುಗಾರರು ಧಾವಿಸಿ ಬಂದರು. ಅದಾಗಲೇ ಇಬ್ಬರೂ ಮೃತಪಟ್ಟಿದ್ದರು.

ಇಲ್ಲಿ ವಾಸ್ತವ್ಯ ಇಲ್ಲದ ಒಂದು ಹೆಂಚಿನ ಮನೆಯನ್ನು ಎರಡು ಕುದ್ರುಗಳ ನಡುವೆ ವಿದ್ಯುತ್‌ ತಂತಿ ಎಳೆಯಲು ಬಳಸಲಾಗಿದೆ. ಸ್ಥಳಕ್ಕೆ ಹೆಚ್ಚವರಿ ಪೊಲೀಸ್‌ ಅಧಿಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ಪಿಐ ನವೀನ್‌ಚಂದ್ರ, ಮಲ್ಪೆ ಠಾಣೆ ಪಿಎಸ್‌ಐ ಮಧು ಬಿ.ಇ. ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.