ತುಳುನಾಡಿನ ಇತಿಹಾಸ ಪ್ರಸಿದ್ಧ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ – Vishwanews24

Featured, ವಿಶೇಷ ಲೇಖನಗಳು

ಕೆಮ್ಮಲೆತ ಬ್ರಹ್ಮ ಎನ್ಕಲೇ ಕುಲದ್ಯವೊ ಬ್ರಹ್ಮ .

ಸುಳ್ಯ ತಾಲೂಕಿನ ಹೇಮಳ ಎಣ್ಮೂರು ಎ೦ಬಲಿೢ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ ತುಳುನಾಡಿನ ಇತಿಹಾಸದಲ್ಲಿ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ,  ಪ್ರಸಿದ್ಧ ಗರಡಿಯಾಗಿದೆ..

ತುಳುನಾಡಿನ ಇತಿಹಾಸದಲ್ಲಿ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ ಇತಿಹಾಸ ಪ್ರಸಿದ್ಧ ಗರಡಿಯಾಗಿದೆ. ಪ್ರಕೃತ ದಕ್ಷಿಣ ಕನ್ನಡ, ಕಾಸರಗೋಡು , ಉಡುಪಿ, ಕೊಡಗು ಜಿಲ್ಲೆಯಲ್ಲಿ ಸುಮಾರು 2೦೦ಕ್ಕು ಹೆಚ್ಚು ಗರಡಿಗಳಿವೆ. ಎಲ್ಲಾ ಗರಡಿಗಳಿಗೆ *ಆದಿ(ಮೂಲ)* ಗರಡಿಯಾಗಿ ಎಣ್ಮೂರು ಗರಡಿ ನೆಲೆ ನಿಂತಿದೆ. ಸುಮಾರು 450 ವರ್ಷಗಳ ಹಿಂದೆ ಕೋಟಿ ಚೆನ್ನಯ ಅವಳಿ ವೀರರ ಜನನ ಒಂದೇ ದಿನ ಆಯಿತು. ಮುಂದೆ ಸುಮಾರು ಅಂದಾಜು 37ವರ್ಷ ಇವರು ಬಾಳಿ ಬೆಳಗಿದರು.

ಇತಿಹಾಸ

ದೇವಂಶ ಸಂಭೂತಳಾದ ತಾಯಿ ದೇಯಿ ಬೈದೆತಿಯು ನಾಟಿ ವೈದ್ಯೆಯಾಗಿದ್ದು ಪಟುಮಲೆ ಪೆರುಮಾಲ್ ಬಲ್ಲಾಳರ ಶೂಶ್ರೂಷೆಗೆಂದು ಬಂದ ಸಂದರ್ಭದಲ್ಲಿ ಬೀಡಿನಲ್ಲಿಯೇ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುತ್ತಾಳೆ. ಕೋಟೇಶ್ವರ ದೇವರ ಹೆಸರನ್ನೇ ಕೋಟಿ ಚೆನ್ನಕೇಶ್ವರ ದೇವರ ಹೆಸರಿನಲ್ಲಿ ಚೆನ್ನಯ ಎಂದು ಮಕ್ಕಳು ಹೆಸರು ಪಡೆಯುತ್ತಾರೆ. ಈ ಮಕ್ಕಳು ಅತಿಮಾನುಷ ಯೋಗದವರಾಗಿದ್ದು ಮುಂದೆ ಕಾರಣಿಕ ಪುರುಷರಾಗುತ್ತಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿಯುತ್ತಾರೆ. ಕೆಲವೇ ದಿನಗಳಲ್ಲಿ ದೇಯಿ ಬೈದೆತಿ ಇಹಲೋಕವನ್ನು ತ್ಯಜಿಸಿದಾಗ ಬಲ್ಲಾಳರ ರಾಜಾಶ್ರಯದಲ್ಲಿ ಬೆಳೆದ ಈ ಮಕ್ಕಳು ವಿದ್ಯಾಪಾರಂಗತರಾಗುತ್ತಾರೆ. ಮಲ್ಲ ಯುದ್ಧದಲ್ಲೂ ಪ್ರವೀಣರಾಗಿ ಖ್ಯಾತಿಯನ್ನು ಪಡೆಯುತ್ತಾರೆ. ಬೆಳೆದು ದೊಡ್ಡವರಾಗಿ ನ್ಯಾಯ ದರ್ಮಕ್ಕಾಗಿ ಹೋರಾಡಿದ ಈ ಅವಳಿ ವೀರರಿಗೂ ದುಷ್ಟ ಮಂತ್ರಿ ಬುದ್ಯಂತನಿಗೂ ಮುಂದೊಂದು ದಿನ ಜಗ ಳವಾಗಿ ಬುದ್ಯಂತನು ಕೊಲೆಯಾಗುತ್ತಾನೆ. ಬಲ್ಲಾಳರು ಕೋಟಿ ಚೆನ್ನಯರನ್ನು ಪಡುಮಲೆಯಿಂದ ಗಡಿಪಾರು ಘೋಷಿಸಿದಾಗ ಸತ್ಯಕ್ಕಾಗಿ ಹೋರಾಡುತ್ತೇವೆ. ಎಂದು ಸಿಡಿದೆದ್ದು ಕೋಟಿ ಚೆನ್ನಯರು ಶಪಥಮಾಡಿ ಹುಟ್ಟೂರನ್ನು ತೊರೆಯುತ್ತಾರೆ.

ಅಲ್ಲಿಂದ ಹೊರಟ ಕೋಟಿ-ಚೆನ್ನಯರು ತಾಯಿಯ ಹರಕೆ ಸಲ್ಲಿಸಲು ತಮ್ಮ ಕುಲ ದೈವ ಕೆಮ್ಮಲಾಜೆ ನಾಗಬ್ರಹ್ಮ ಬಳಿಗೆ ಬಂದಾಗ ಅರ್ಚಕರು ಪೂಜೆ ಮುಗಿಸಿ ಬಾಗಿಲು ಹಾಕಿ ಹೊರಡುತ್ತಾರೆ. ಪುನಃ ಬಾಗಿಲು ತೆಗೆಯಲು ಅರ್ಚಕರು ನಿರಾಕರಿಸುತ್ತಾರೆ. ಕೋಟಿ ಚೆನ್ನಯರು ತಮ್ಮ ಕುಲದೈವವನ್ನು ಮೊರೆಯಿಟ್ಟಾಗ ಗುಂಡದ ಬಾಗಿಲು ತೆರೆಯುತ್ತದೆ. ಗಂಟೆಯ ನಿನಾದ ಕೇಳಿ ಬರುತ್ತದೆ. ಅಂದಿನಿಂದ ಕೋಟಿ ಚೆನ್ನಯರು ಕಾರಣಿಕೆ ಪುರುಷರೆಂದು ತಿಳಿದು ಬರುತ್ತದೆ.

ನಾಗಬ್ರಹ್ಮನ ಅನುಗ್ರಹ ಪಡೆದ ಕೋಡಿ ಚೆನ್ನಯರು ಅಕ್ಕ ಕಿನ್ನಿದಾರುವನ್ನು ನೋಡಲು ದೋಳ ಎಂಬಲ್ಲಿಗೆ ಬಂದು ಅಕ್ಕನ ಆತಿಧ್ಯ ಪಡೆಯುತ್ತಾರೆ. ಅಲ್ಲಿಂದ ಅವರ ಭಾವ ಪೈಯ್ಯ ಬೈದನ ತಮ್ಮ ಚಂದುಗುಡಿ ಸೇನಾಧಿಪತಿಯಾಗಿರುವ ಪಂಜ ಕೇಮರ ಬಲ್ಲಾಳರ ಆಶ್ರಯಕ್ಕಾಗೆ ಹೋಗುತ್ತಾರೆ. ಆದರೆ ಚಂದುಗುಡಿಯ ಕುತಂತ್ರದಿಂದ ಕೇಮರ ಬಲ್ಲಾಳರು ಕೋಟಿ ಚೆನ್ನಯರನ್ನು ಸೆರೆಮನೆಗೆ ಹಾಕುತ್ತಾರೆ..ಭ್ರಹ್ಮನ ಕೃಪೆಯಿಂದ ಸೆರೆಮನೆಯ ಬಾಗಿಲು ತೆರೆದು ಅಲ್ಲಿಯೂ ಪಾರಾಗಿ ಮುಂದೆ ಧರ್ಮಾತ್ಮನೂ ಸತ್ಯವಂತನೂ ಆದ ಎಣ್ಮೂರು ದೇವಣ್ಣ ಬಲ್ಲಾಳರ ಆಶ್ರಯ ಪಡೆಯುತ್ತಾರೆ. ಕೋಟಿ ಸೇನಾಧಿಯಾಗುತ್ತಾನೆ. ಬಲ್ಲಾಳರು ಕೋಟಿ ಚೆನ್ನಯರಿಗೆ ಎಣ್ಮೂರಿನ ಐಯ್ಯನ್ನೂರು (ಐವತ್ತೊಕ್ಲು) – ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡು ಬ್ರಹ್ಮ ಕಲಶೋತ್ಸವ ಆದ ನಿಡ್ವಳ ಶ್ರೀ ಮಹಾವಿಷ್ಣು ದೇವರು ಕೋಟಿ ಚೆನ್ನಯರು ಆರಾಧಿಸುತ್ತಿದ್ದ ದೇವರಾಗಿದ್ದರು. ಹಾಗೂ ಗುತ್ತು ಎಂಬ ಭೂಮಿಗಳನ್ನು ಉಂಬಳಿ ನೀಡುತ್ತಾರೆ.

ಎಣ್ಮೂರು ಬಲ್ಲಾಳರಿಗೂ ಪಂಜ ಕೇಮರ ಬಲ್ಲಾಳರಿಗೂ ಯುದ್ಧ ನಡೆಯುತ್ತದೆ. ಧರ್ಮ ಯುದ್ಧದಲ್ಲಿ ಕೋಟಿ ಚೆನ್ನಯರು ಎಣ್ಮೂರು ಬಲ್ಲಾಳರಿಗೆ ಜಯವನ್ನು ತಂದು ಕೊಡುತ್ತಾರೆ. ಆದರೆ ವೈರಿಗಳ ಕುತಂತ್ರದಿಂದ ಸಾಕಿದ ಪೆರುಮಾಳ ಬಲ್ಲಾಳರೇ ಹಿಂದಿನಿಂದ ಕೋಟಿಯ ಬೆನ್ನಿಗೆ ಬಾಣ ಬಿಟ್ಟು ಕೊಲ್ಲುತ್ತಾರೆ.ಕೋಟಿಯು ತನ್ನ ಪ್ರಾಣ ತ್ಯಾಗ ಮಾಡುವಾಗ ಮೂವರೂ ಬಲ್ಲಾಳರನ್ನು ಕರೆದು ನೀವು ಒಗ್ಗಟ್ಟಾಗಿರಬೇಕು ತುಳುನಾಡಿನ ಕೀರ್ತಿಯನ್ನು ಬೆಳಗಬೇಕು ಎಂದು ಅಭಯನೀಡಿ ಕೊನೆಯುಸಿರೆಳೆಯುತ್ತಾನೆ. ಅಣ್ಣನ ಅಗಲಿಕೆಯನ್ನು ಸಹಿಸದ ಚೆನ್ನಯನು ಪ್ರಾಣಾರ್ಪಣೆ ಮಾಡುತ್ತಾನೆ.

ಒಟ್ಟಿಗೆ ಜನನ ಮರಣವನ್ನು ಕಾರಣೀಕ ಪುರುಷರಾದ ಕೋಟಿ ಚೆನ್ನಯರು ಪಡೆಯುತ್ತಾರೆ. ಮುಂದೆ ಕೋಟಿ ಚೆನ್ನಯರನ್ನುಎಣ್ಮೂರು ಮಣ್ಣಿನಲ್ಲಿ ದಫನ ಮಾಡಲಾಯಿತು.ಮತ್ತು ಗೋರಿಗಳನ್ನು ಕಟ್ಟಲಾಯಿತು ಮತ್ತು ಅವರ ಸುರಿಯ ವಸ್ತ್ರಾಭರಣಗಳನ್ನು ಗೋರಿಯ ಹತ್ತಿರ ಹುದುಗಿಸಿಡಲಾಯಿತು..ದೇವಣ್ಣ ಬಲ್ಲಾಳರು ಕೋಟಿ ಚೆನ್ನಯರ ಅಂತ್ಯ ಸಂಸ್ಕಾರವನ್ನು ರಾಜ ಮರ್ಯಾದೆಯಲ್ಲಿ ನೆರವೇರಿಸುರತ್ತಾರೆ. ಈ ಜಾಗದಲ್ಲಿ ಹುತ್ತ ಬೆಳೆದಿದೆ, ಇದು ಬಹಳ ವಿಶೇಷ.

ಮುಂದೆ ಬಲ್ಲಾಳರು ಅವಳಿ ವೀರರನ್ನು ಕಳೆದುಕೊಂಡು ಚಿಂತಾಕ್ರಾಂತರಾಗಿದ್ದಾಗ, ಬೆಳಗ್ಗಿನ ಜಾವ ಬಲ್ಲಾಳರಿಗೆ ಸ್ವಪ್ನ ಬೀಳುತ್ತದೆ. ಸ್ವಪ್ನದಲ್ಲಿ ಕೋಟಿಚೆನ್ನಯರು “ ಓ ಬಲ್ಲಾಳರೆ ನಾವು ಕೋಟಿಚೆನ್ನಯರು, ನಾವು ನಿಮ್ಮ ಏಳುಕೈ ಕೊಪ್ಪರಿಗೆಯ ಹಾಲು ಕುಡಿದವರು, ನಾವು ಕಾಯ ಬಿಟ್ಟು, ಮಾಯ ಸೇರಿದ್ದೇವೆ. ಇನ್ನು ಮುಂದೆ ನಾವು ಎಣ್ಮೂರಿನಲ್ಲಿ ಬೈದೇರುಗಳಾಗಿ ಕಾರಣಿಕ ಪುರುಷರಾಗೆ ನೆಲೆನಿಲ್ಲುತೇವೆ. ಬಲ್ಲಾಳರೆ ನಮಗೆ ಗರಡಿ ಕಟ್ಟಿಸಿ,ಚಪ್ಪರೊಂಬು ಮಾಡಿಸಿ, ರಾಮ ಲಕ್ಷ್ಮಣರೆಂಬ ಸುರಿಯ ಮಾಡಿಸಿ ಬೀಡಿನ ಉಳ್ಳಾಕ್ಲು ಸ್ಥಾನದಿಂದ ಸುಗ್ಗಿ ತಿಂಗಳ ಪೂವೆಯಂದು ಭಂಡಾರ ತೆಗೆಸಿನಮಗೆ ಎಣ್ಮೂರು ನೇತ್ರಾದಿ ಗರಡಿಯಲ್ಲಿ ನೇಮ ನಡಾವಳಿ ನಡೆಸಿ, ಪ್ರಾತಃಕಾಲ ನಮಗೆ ಬೀಡಿನಲ್ಲಿ ನಿಮ್ಮ ಕೈಯಿಂದ ಹಾಲು ಕೊಡಬೇಕು” ಎಂಬ ಸಂದೇಶ ಸ್ವಪ್ನದಲ್ಲಿ ಗೋಚರಿಸಿತು.

ಅದರಂತೆ ಇಂದಿಗೂ ಪ್ರಥಮವಾಗಿ ಉಳ್ಳಾಕುಳು ದೈವಕ್ಕೆ ನೇಮ ನಡೆಯುತ್ತದೆ. ಮರುದಿನ ಇಷ್ಟದೇವತೆ ಮತ್ತು ಕಾಜುಕುಜುಂಬ ನೇಮದ ನಂತರ ಸುಗ್ಗಿ ತಿಂಗಳ ಪೂವೆಯಂದು ಎಣ್ಮೂರು ಬೈದೇರುಗಳ ನೇಮ ನಡೆಯುತ್ತದೆ. ಕೋಟಿ ಚೆನ್ನಯರ ನೇಮೋತ್ಸವ ಪ್ರಪ್ರಥಮವಾಗಿ ಎಣ್ಮೂರಿನಲ್ಲಿ ದೇವು ಬಲ್ಲಾಳರಿಂದಲೇ ನಡೆದದ್ದು ಎಂಬ ವಿಚಾರ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದುಬರುತ್ತದೆ.ಬೇಯಿಸಿದ ಭತ್ತ ಮೊಳಕೆ ಬಂದ ಕಡೆ ಗರಡಿ ಕಟ್ಟಿಸಬೇಕೆಂದು ತಿಳಿದಂತೆ 2೦೦ ಕ್ಕು ಹೆಚ್ಚು ಗರಡಿಗಲು ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ ಗರಡಿಗಳಲ್ಲೂ ನೇಮೋತ್ಸವ ನಡೆಯುವಾಗ ಇಂದಿಗೂ ಎಣ್ಮೂರು ನೇತೃತ್ವದ ಗರಡಿ ಎಲ್ಲಾ ಗರಡಿಗಿಂತ *ಆದಿ(ಮೂಲ)* ಗರಡಿ ಎಂದು ಹೇಳುವ ವಾಕ್ಯ ಇಂದಿಗೂ ಸತ್ಯವಾಗಿದೆ. ಬಲ್ಲಾಳರ ನಂತರ ಎಣ್ಮೂರು ಕಟ್ಟ ಬೀಡಿನ ಬಂಟ ಮನೆತನದವರು ಸಂಪ್ರದಾಯಕ್ಕೆ ಚ್ಯುತಿಬರದಂತೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದಾರೆ.

ನೇಮೋತ್ಸವ:
ಬಲ್ಲಾಳರ ವಂಶ ನಿಸಂತತಿಗೊಂಡಾಗ ಬಲ್ಲಾಳರು ಕಟ್ಟ ಕುಟುಂಬದವರಿಗೆ ಎಣ್ಮೂರು ಊರಿನ ಸರ್ವಾಧಿಕಾರವನ್ನು ನೀಡಿ ಸಕಲ ಆಡಳಿತವನ್ನು ಹಸ್ತಾಂತರಿಸುತ್ತಾರೆ. ಹೀಗೆ ಶತಮಾನಗಳಿಂದ ಕಟ್ಟಬೀಡು ಮನೆತನದವರ ಆಡಳಿತದಲ್ಲಿ ಬೈದೇರುಗಳ ನೇಮೋತ್ಸವವು ನಡೆಯುತ್ತಾ ಬಂದಿದೆ. ಪ್ರಕೃತ ಎಣ್ಮೂರು ಕಟ್ಟ ಹಿರಿಯರಾದ ಶ್ರೀ ರಾಮಕೃಷ್ಣ ಶೆಟ್ಟಿಯರು ಅನುವಂಶಿಕ ಆಡಳಿತದಾರರಾಗಿದ್ದಾರೆ.

ಈ ಹಿಂದೆ 32 ವರ್ಷಗಳ ಸುದೀರ್ಘ ಆಡಳಿತವನ್ನು ನಡೆಸಿದ ಕಟ್ಟ ಲಕ್ಷ್ಮೀ ನಾರಾಯಣ ರೈ ಯವರ ಆಡಳಿತಾವಧಿಯಲ್ಲಿ ನೂತನ ಗರಡಿ ನಿರ್ಮಾಣಗೊಂಡು ಬ್ರಹ್ಮ ಕಲಶವಾಗಿ ಮುಂದೆ ಕೋಟಿಚೆನ್ನಯರು ಆರಾಧಿಸುತ್ತಿದ್ದ ಶೃಈ ಮಹಾವಿಷ್ನು ದೇವಸ್ಥಾನದ ಜೀಣೋದ್ಧಾರದ ಕೆಲಸವೂ ಆರಂಭವಾಗಿತ್ತು. ಪ್ರಕೃತ ಶ್ರೀ ಕೆ. ರಾಮಕೃಷ್ಣ ಶಟಿಯವರು ಶ್ರೀ ಕೋಟಿ ಚೆನ್ನಯರ ಗರಡಿಯ ಆಡಳಿತವನ್ನು ವಹಿಸಿಕೊಂಡ ಬಳಿಕ ನೇಮೋತ್ಸªವನ್ನು ಬಹಳ ವಿಅಜೃಂಭಣೆಯಿಂದ ಮತ್ತು ನೇಮೋತ್ಸವ ದಿನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಾಧಕರಿಗೆ ವ್ಯಕ್ತಿಗಳಿಗೆ ಸನ್ಮಾನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮೊದಲಾದ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ. ಅಲ್ಲದೆ ಶ್ರೀ ಕೋಟಿ ಚೆನ್ನಯರು ಆರಾಧಿಸುತ್ತಿದ್ದ ಶ್ರೀ ಮಹಾವಿಷ್ಣು ದೇವಸ್ಥಾನ ನಿಡ್ವಾಳ, ಎಣ್ಮೂರು ಐವತ್ತೊಕ್ಲು ಇದರ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಊರವರ ಸಹಕಾರದೊಂದಿಗೆ ಕೋಟಿ ಚೆನ್ನಯರು ಗರಡಿಯ ಅಧಿಕಾರ ವಹಿಸಿಕೊಂಡ ಬಳಿಕ ಒಂದೇ ವರ್ಷದೊಳಗೆ ಶ್ರೀ ಮಹಾವಿಷ್ಣು ದೇವರ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಿದ ಸಾಧನಶೀಲ ವ್ಯಕ್ತಿಯಾಗಿದ್ದಾರೆ.

ಊರಿನ ಗ್ರಾಮ ದೈವದ ವರ್ಷಾವಧಿ ನೇಮ ನಡವಳಿಗಳೂ ಶ್ರೀಯುತ ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ನಡೆಯುತ್ತದೆ.

ಕ್ಷೇತ್ರ ವಿಶೇಷತೆ:

1). ಎಣ್ಮೂರು ಮೂಲ ಅದಿಗರಡಿಯ ಪಕ್ಕದಲ್ಲೇ ಕೋಟಿಚೆನ್ನಯರ ಅವಳಿ ಗೋರಿ ಇದೆ. ಸುಮಾರು ಏಳು ಅಡಿ ಚೌಕದ ಹದಿನೈದು ಅಡಿ ಎತ್ತರವಿರುವ ಗೋವುಕಾಕೃತಿಯ ರೂಪದಲ್ಲಿ ಇರುವ ಈ ಸಮಾಧಿಯ ಪಕ್ಕದಲ್ಲೇ ಅವರ ಆಯುಧಗಳನ್ನು ಮಣ್ಣಿನ ಅಡಿಯಲ್ಲಿ ಇಡಲಾಗಿದೆ. ಸದ್ರಿ ಹುತ್ತದಲ್ಲಿ ವಾಸ್ತವ್ಯ ನಾಗ ಸದಾ ಇದೆ.
2). ಅಣ್ಣ- ತಮ್ಮಂದಿರ ಕಳೇಬರವನ್ನು ಇಟ್ಟಿದ್ದ ಮಂಜಲ್ ಪಾದೆ.
3). ಎಣ್ಮೂರು – ಪಂಜ ವಿವಾದಿತ ಗಡಿಕಲ್ಲು
4). ಕೆಮ್ಮ್ಮಲೆಯ ನಾಗಬ್ರಹ್ಮ ಗುಡಿ
5). ಹತ್ತಿರದ ಎಡಮಂಗಲ ಗ್ರಾಮ ದೋಲ ಎಂಬಲ್ಲಿ ಶತಮಾನಗಳ ಹಿಂದಿನ ಪುರಾತನ ಮುಳಿಹುಲ್ಲಿನ ಮನೆ ಈಗಲೂ ಇದ್ದು. ಅಲ್ಲಿ ಕೋಟಿಚೆನ್ನಯರು ಕುಳಿತು ಹಾಲುಕುಡಿದ ತೂಗು ಉಯ್ಯಾಲೆ ಇವುಗಳನ್ನು ಈಗಲೂ ಎಣ್ಮೂರು ಪರಿಸರದಲ್ಲಿ ಕಾಣಬಹುದು.