ದಿ ವಿಲನ್ ಚಿತ್ರದಲ್ಲಿ ಕನ್ನಡ ಬಾವುಟಕ್ಕೆ ಅವಮಾನ: ಕಿಚ್ಚ ಸುದೀಪ್, ಹಾಗೂ ನಿರ್ದೇಶಕ ಪ್ರೇಮ್ ವಿರುದ್ಧ ದೂರು ದಾಖಲು
ಬೆಂಗಳೂರು: ಕನ್ನಡ ಬಾವುಟಕ್ಕೆ ಅವಮಾನ ಮಾಡಿದ ಆರೋಪದಡಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಪ್ರೇಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.
ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ “ದಿ ವಿಲನ್” ಚಿತ್ರದ ಹಾಡೊಂದರಲ್ಲಿ ಸುದೀಪ್ ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿಕೊಳ್ಳುವ ಮೂಲಕ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ನಿರ್ದೇಶಕ ಪ್ರೇಮ್ ಹಾಗೂ ಸುದೀಪ್ ಇಬ್ಬರೂ ಕ್ಷಮೆ ಕೇಳಬೇಕು ಎಂದುಕನ್ನಡ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಕನ್ನಡ ಚಳವಳಿ ನಾಗೇಶ್ ಎನ್ನುವವರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು ಹಾಗೇನಾದರೂ ಕ್ಷಮೆ ಕೇಳದೆ ಹೋದರೆ “ದಿ ವಿಲನ್” ಪ್ರದರ್ಶಿಸಲಾಗುವ ಚಿತ್ರಮಂದಿರಗಳ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
