ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ , ಕನ್ನಡಿಗರ ಶಕ್ತಿ ಏನೆಂದು ತೋರಿಸುವ ಕಾಲ ಈಗ ಬಂದಿದೆ : ಕುಮಾರಸ್ವಾಮಿ – Vishwanews24

Featured, ರಾಜ್ಯ ನ್ಯೂಸ್

ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ , ಕನ್ನಡಿಗರ ಶಕ್ತಿ ಏನೆಂದು ತೋರಿಸುವ ಕಾಲ ಈಗ ಬಂದಿದೆ : ಕುಮಾರಸ್ವಾಮಿ – Vishwanews24

ಬೆಂಗಳೂರು: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ. ಕನ್ನಡಿಗರ ಶಕ್ತಿ ಏನೆಂದು ತೋರಿಸುವ ಕಾಲ ಈಗ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ತಡರಾತ್ರಿ ಪುಂಡರು ನಡೆಸಿರುವ ದಾಂಧಲೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿರುವ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಇಂಥ ಭಯೋತ್ಪಾದನೆಯನ್ನು ಕೊನೆಗಾಣಿಸಬೇಕಾಗಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಘಟನೆ ಕುರಿತಂತೆ ಟ್ವೀಟ್ ಮೂಲಕ ಮಾಡಿರುವ ಕುಮಾರಸ್ವಾಮಿ ಅವರು, ಪುಂಡರ ಹೆಡೆಮುರಿ ಕಟ್ಟಿ ತಕ್ಕ ಶಾಸ್ತಿ ಮಾಡಬೇಕು. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಬೆಳಗಾವಿಯಲ್ಲಿ ತಡರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವುದು ಅಕ್ಷಮ್ಯ. ವಿಧಾನಮಂಡಲ ಅಧಿವೇಶನಕ್ಕೆ ಹೋಗಲು ಪಾಸ್ ಅಂಟಿಸಲಾಗಿದ್ದ ವಾಹನಗಳನ್ನೇ ಗುರಿ ಮಾಡಲಾಗಿದೆ. ಕನ್ನಡಿಗರ ಹೆಮ್ಮೆಯಾದ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಹಾಳು ಮಾಡಿರುವುದು ಕ್ಷಮಾರ್ಹವಲ್ಲದ ಅಪರಾಧ. ಖಂಡನೀಯ ಎಂದಿದ್ದಾರೆ.

ಬೆಳಗಾವಿಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿ ಭಾಷಾ ವೈಷಮ್ಯವನ್ನು ಹೆಚ್ಚಿಸುವುದು ದುರುಳರ ಉದ್ದೇಶವಿದ್ದಂತಿದೆ. ಶಾಂತಿಯನ್ನು ಕದಡಿ ಜನರಲ್ಲಿ ಭಯಭೀತಿ ಉಂಟು ಮಾಡಲು ಪುಂಡರನ್ನು ಪ್ರಚೋದಿಸಿದವರನ್ನು ಹೊರಗೆಳೆದು ಶಿಕ್ಷಿಸಬೇಕು. ಈ ಪುಂಡಾಟದ ಹಿಂದೆ ದೊಡ್ಡ ಹುನ್ನಾರ ಇರುವಂತಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಿ ಕಾರುಗಳನ್ನು ಗುರಿ ಮಾಡಿರುವುದು ರಾಜ್ಯ ಸರ್ಕಾರವನ್ನೇ ಗುರಿ ಮಾಡಿದಂತೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿರುವುದು ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ದಾಳಿಗೆ ಸಮ. ಸರ್ಕಾರ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಕೂಡಲೇ ಆ ದುರುಳರಿಗೆ ಕನ್ನಡಿಗರ ಶಕ್ತಿ ಏನೆಂಬುದನ್ನು ತೋರಿಸಬೇಕು. ಬೆಳಗಾವಿಯಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿರುವ ಈ ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ. ಕನ್ನಡಿಗರ ಶಕ್ತಿ ಏನೆಂದು ತೋರಿಸುವ ಕಾಲ ಈಗ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.