ದೇವರ ಫೋಟೋಗಳನ್ನು ಎಸೆದು ವಾಸ್ತವದ ನಡುವೆ ಬದುಕಿ ; ರಾಮ ಮಂದಿರ ಕಟ್ಟುವವರಿಗೆ ವೋಟ್ ಹಾಕ್ಬೇಡಿ : ವಿವಾದಾತ್ಮಕ ಹೇಳಿಕೆ ನೀಡಿದ ಪ್ರೊ. ಕೆ.ಎಸ್. ಭಗವಾನ್
ಮೈಸೂರು: ಶಾಲಾ, ಕಾಲೇಜುಗಳಲ್ಲಿ ಓದುವ ಇತಿಹಾಸದಲ್ಲಿನ ಪಠ್ಯಗಳು ಶೇಕಡ 50 ರಷ್ಟು ಸುಳ್ಳು. ಬುದ್ಧ ಬರುವುದಕ್ಕೆ ಮುನ್ನ ಹಿಂದೂ ಧರ್ಮ ಮೂಢನಂಬಿಕೆ, ಕಂದಾಚಾರದಿಂದ ತುಂಬಿದ ಧರ್ಮ ಆಗಿತ್ತು ಎಂದು ವಿವೇಕಾನಂದರೇ ಹೇಳಿದ್ದಾರೆ ಅಂತಾ ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಿಷ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್. ಭಗವಾನ್, ಹರಪ್ಪ ನಾಗರಿಕತೆಯಲ್ಲೇ ಶಿವನ ಹೆಸರಿದೆ. ಶಿವ ಯಜ್ಞ, ಯಾಗಗಳನ್ನು ನಿರಾಕರಿಸಿದವನು. ದೇಶದ ಮೂಲ ದೇವರಾದ ಶಿವನ ದೇವಸ್ಥಾನ ಕಟ್ಟುತ್ತಿಲ್ಲ, ಆದ್ರೆ ಜಾತಿ, ವರ್ಣಭೇದ ಮಾಡಿದ ರಾಮನ ದೇವಸ್ಥಾನ ನಿರ್ಮಾಣ ಮಾಡಲು ಹೊರಟಿದ್ದಾರೆ. ಇರುವುದು ಎರಡು ಜಾತಿ.. ಜನಿವಾರ ಹಾಕಿದವರು, ಜನಿವಾರ ಹಾಕದವರು. ರಾಮಾಯಣದಲ್ಲಿ ರಾಮನ ಬಾಯಲ್ಲಿ ಬುದ್ಧನನ್ನು ಬೈಯಿಸಿದ್ದಾರೆ. ಆದರೆ ಪುರಾಣದಲ್ಲಿ ರಾಮನ ಒಂದು ಅವತಾರ ಬುದ್ಧ ಅಂತ ಹೇಳುತ್ತಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮನುವಾದಿಗಳನ್ನ ತಿರಸ್ಕರಿಸಿ. ರಾಮನ ದೇವಸ್ಥಾನ ಕಟ್ಟಲು ಹೊರಟಿರೋ ಮಂದಿಗೆ ಓಟ್ ಹಾಕ್ಬೇಡಿ. ರಾಮ ಮಂದಿರ ಕಟ್ಟುವ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿ. ರಾಮ ಮಂದಿರ ಕಟ್ಟುವ ಬದಲು ಹೊಸ ಡ್ಯಾಂಗಳನ್ನ ಕಟ್ಟಿ. ದೇಶದ ಮೇಲೆ 27 ಬಾರಿ ವಿದೇಶಿಯರಿಂದ ಆಕ್ರಮಣ ಆಯ್ತು. ನಿಮ್ಮ ರಾಮ, ಚಾಮುಂಡೇಶ್ಚರಿ, ಶಿವ ಎಲ್ಲಿ ಹೋಗಿದ್ರು, ಯಾಕೆ ರಕ್ಷಣೆ ಮಾಡಲಿಲ್ಲ? ಹೀಗಾಗಿ ದೇವರ ಪೊಟೋಗಳನ್ನ ಎಸೆದು ವಾಸ್ತವದ ನಡುವೆ ಬದುಕಿ, ನಮಗೆ ರಾಮರಾಜ್ಯ ಬೇಡ, ಭೀಮರಾಜ್ಯ ಬೇಕು ಎಂದು ಹೇಳಿದ್ದಾರೆ.

