ದೇಶವನ್ನು ಬಿಜೆಪಿಯಿಂದ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇವೆ: ಚಂದ್ರಬಾಬು ನಾಯ್ಡು
ನವದೆಹಲಿ: ದೇಶವನ್ನು ಬಿಜೆಪಿಯಿಂದ ಉಳಿಸಲು ಕಾಂಗ್ರೆಸ್ ಜೊತೆ ತೆಲುಗು ದೇಶಂ ಪಕ್ಷ(ಟಿಡಿಪಿ) ಕೈ ಜೋಡಿಸಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಹೊತ್ತಿಗೆ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿರುವ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್ ಸಿಪಿ ಅಧ್ಯಕ್ಷ ಶರದ್ ಪವರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ ಅವರನ್ನು ಗುರುವಾರ ಭೇಟಿಯಾದರು.
ಪ್ರಜಾಪ್ರಭುತ್ವವನ್ನುರಕ್ಷಿಸಿ. ಭವಿಷ್ಯವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಗೋಸ್ಕರ ಯೋಜನೆ ರೂಪುಗೊಳಿಸಲು ಪ್ರತಿಪಕ್ಷಗಳೆಲ್ಲ ಒಂದಾಗಿದ್ದಾಗಿ ತಿಳಿಸಿದ್ದಾರೆ.ದೇಶ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಒಟ್ಟಾಗುವುದು ಅಗತ್ಯವಾಗಿದೆ ಎಂದಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಮಾತನಾಡಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಇಂದು ಕಾಂಗ್ರೆಸ್ ಜೊತೆ ಒಂದಾಗಿದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ಭ್ರಷ್ಟಾಚಾರ, ರಫೇಲ್ ಡೀಲ್, ನಿರುದ್ಯೋಗ ಹಾಗೂ ವ್ಯವಸಾಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸುಪ್ರೀಂ ಕೋರ್ಟ್, ಸಿಬಿಐ, ಜಾರಿ ನಿರ್ದೇಶನಾಲಯ, ಆರ್ ಬಿಐ ಸೇರಿದಂತೆ ಹಲವು ಸಂಸ್ಥೆಗಳನ್ನು ಹಾಳು ಮಾಡುತ್ತಿದೆ ಎಂದು ದೂರಿದರು.
ಪ್ರಧಾನಿ ಮೋದಿಯವರು ಆಂಧ್ರಪ್ರದೇಶದ ಜನರಿಗೆ ದ್ರೋಹ ಮಾಡಿದ್ದಾರೆ. ಬಿಜೆಪಿಯ ರೀತಿ ರಿವಾಜುಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿವೆ. ನಾನು ದೇಶವನ್ನು ಬಿಜೆಪಿಯಿಂದ ರಕ್ಷಿಸುವುದಕ್ಕೋಸ್ಕರ ಮೈತ್ರಿಯಿಂದ ಹೊರಗೆ ಬಂದಿದ್ದೇನೆ ಎಂದು ನಾಯ್ಡು ಹೇಳಿದ್ದಾರೆ.
ಜಾಹೀರಾತುಗಳು


