ನಕ್ಸಲರು ಮುಖ್ಯಮಂತ್ರಿಯವರ ಕಚೇರಿಗೆ ಬಂದು ಶರಣಾಗತರಾಗಿರುವುದರಲ್ಲಿ ತಪ್ಪೇನಿದೆ.. ?: ಗೃಹ ಸಚಿವ ಪರಮೇಶ್ವರ್ – vishwanews24
ನಕ್ಸಲರು ಮುಖ್ಯಮಂತ್ರಿಯವರ ಕಚೇರಿಗೆ ಬಂದು ಶರಣಾಗತರಾಗಿರುವುದರಲ್ಲಿ ತಪ್ಪೇನಿದೆ.. ? ಜಿ.ಪರಮೇಶ್ವರ್
ಬೆಂಗಳೂರು: ನಕ್ಸಲರು ಮುಖ್ಯಮಂತ್ರಿಯವರ ಕಚೇರಿಗೆ ಬಂದು ಶರಣಾಗತರಾಗಿರುವುದರಲ್ಲಿ ತಪ್ಪೇನಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನಕ್ಸಲ್ ಚಟುವಟಿಕೆಗೆ ಬರಬಾರದು ಎಂಬ ಸಂದೇಶ ಇಡೀ ಸಮಾಜಕ್ಕೆ ತಲುಪಬೇಕು. ಮುಖ್ಯಮಂತ್ರಿಯವರ ಮುಂದೆ ಶರಣಾದಾಗ ರಾಜ್ಯದಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ. ನಕ್ಸಲರ ಪರಿವರ್ತನೆಗೆ ಸರಕಾರ ಅವಕಾಶ ಕೊಟ್ಟಿದೆ. ಅದರಲ್ಲಿ ತಪ್ಪೇನಿದೆ. ಬಿಜೆಪಿ ಶಾಸಕ ಸುನೀಲ್ ಕ್ಷೇತ್ರದಲ್ಲಿ ನಕ್ಸಲ್ ಚಟುವಟಿಕೆ ಜಾಸ್ತಿ ಇದೆ. ಎಎನ್ಎಫ್ ಕಾರ್ಕಳದಲ್ಲಿ ಇದೆಯಲ್ಲವೇ?ʼ ಎಂದು ಪ್ರಶ್ನಿಸಿದರು.
ನಕ್ಸಲರು ಶರಣಾದಾಗ ಶಸ್ತ್ರಾಸ್ತ್ರಗಳು ಇರಲಿಲ್ಲ. ಶಸ್ತ್ರಾಸ್ತ್ರಗಳನ್ನು ಬಿಟ್ಟು ಬಂದಿದ್ದಾರೆ. ಎಲ್ಲಿ ಎಸೆದು ಬಂದಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಶೇ. 99ರಷ್ಟು ಕೊನೆಯಾಗಿದೆ. ಶರಣಾಗತರಾದ ನಕ್ಸಲರಲ್ಲಿ ತಮಿಳುನಾಡು, ಕೇರಳ ರಾಜ್ಯದವರು ಇದ್ದಾರೆ. ನಮ್ಮ ಮುಖ್ಯಮಂತ್ರಿಯವರು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಯವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಶರಣಾದ ನಕ್ಸಲರ ಮೇಲೆ ಬೇರೆ ರಾಜ್ಯಗಳಲ್ಲಿ ಪ್ರಕರಣಗಳಿವೆ. ಆ ರಾಜ್ಯದ ಸರಕಾರಗಳು ಸಹ ತೀರ್ಮಾನ ಕೈಗೊಳ್ಳಬೇಕು ಎಂದರು.
