ನಗರದಲ್ಲಿ ರಾತ್ರಿ ವೇಳೆ ಬೀದಿ ನಾಯಿಗಳಿಂದ ನಡೆಯುವ ಅಪಘಾತ ತಪ್ಪಿಸಲು ನಾಯಿಗಳ ಕೊರಳಿಗೆ ರಿಫ್ಲೆಕ್ಟಿಂಗ್ ಬೆಲ್ಟ್ ಹಾಕಿದ ಮಂಗಳೂರಿನ ಯುವಕ ಅಹ್ಮದ್‌ ತೌಸಿಫ್‌ – Vishwanews24

Featured, ದಕ್ಷಿಣ ಕನ್ನಡ
ಮಂಗಳೂರು :ನಗರದಲ್ಲಿ ರಾತ್ರಿ ವೇಳೆ ಬೀದಿ ನಾಯಿಗಳಿಂದ ನಡೆಯುವ ಅಪಘಾತಗಳ ಸಂಖ್ಯೆ ಹೆಚ್ಚು. ಕತ್ತಲಲ್ಲಿ ಏಕಾಏಕಿ ಬೀದಿನಾಯಿಗಳು ವಾಹನಕ್ಕೆ ಅಡ್ಡಬರುವುದು ಗೊತ್ತಾಗುವುದಿಲ್ಲ. ಇದರಿಂದ ವಾಹನ ಸವಾರ ತಬ್ಬಿಬ್ಬಾಗಿ ಅಪಘಾತಕ್ಕೀಡಾಗುತ್ತಾನೆ. ಇಂತಹ ಅಪಘಾತ ತಪ್ಪಿಸಲೆಂದು ಮಂಗಳೂರಿನ ಯುವಕ ತೌಸಿಫ್‌ ಅಹ್ಮದ್‌ ಬೀದಿನಾಯಿಗಳ ಕೊರಳಿಗೆ ರಿಫ್ಲೆಕ್ಟಿಂಗ್‌ ಬೆಲ್ಟ್‌ ಅಳವಡಿಸುವ ವಿನೂತನ ಕ್ರಮ ಕೈಗೊಂಡಿದ್ದಾರೆ.
ರಸ್ತೆ ಬದಿಯ ಕಂಬಗಳಿಗೆ ಅಂಟಿಸಿರುವ, ರಾತ್ರಿ ವೇಳೆ ವಾಹನಗಳ ಹೆಡ್‌ಲೈಟ್‌ಗೆ ಮಿನುಗುವ ಬಣ್ಣದ ಪಟ್ಟಿ ಮಾದರಿಯ ಬೆಲ್ಟ್‌ ಇದು. ರಾತ್ರಿ ಈ ಬಣ್ಣದ ಪಟ್ಟಿಯ ಮೇಲೆ ಬೆಳಕು ಬಿದ್ದಾಗ ಮಿನುಗುತ್ತದೆ. ದೂರದಿಂದಲೇ ಇದು ಗೋಚರವಾಗುತ್ತದೆ. ನಾಯಿಗಳ ಕೊರಳಲ್ಲಿನ ಬೆಲ್ಟ್‌ನಲ್ಲಿಯೂ ಇದೇ ರೀತಿಯ ಗುಣಮಟ್ಟದ ಪಟ್ಟಿ ಹಾಕಲಾಗಿದೆ. ನಾಯಿಯ ಚಲನವಲನ ಬೈಕ್‌ ಸವಾರನಿಗೆ ದೂರದಿಂದಲೇ ತಿಳಿದು ಮುನ್ನೆಚ್ಚರಿಕೆ ವಹಿಸಬಹುದು.
ಬೀದಿನಾಯಿಗಳು ಹೆಚ್ಚಿರುವ ಮತ್ತು ಅದರಿಂದ ಅಧಿಕ ಅಪಘಾತಗಳು ನಡೆಯುವ ಸುರತ್ಕಲ್‌, ಕುಳಾಯಿ, ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್‌ಗೇಟ್‌ ಪ್ರದೇಶದಲ್ಲಿ ಸುಮಾರು 50 ರಿಫ್ಲೆಕ್ಟಿಂಗ್‌ ಬೆಲ್ಟ್‌ಗಳನ್ನು ಬೀದಿನಾಯಿಗಳ ಕೊರಳಿಗೆ ಅಳವಡಿಸಿದ್ದರು. ಈಗ ಸುಮಾರು 500 ಬೆಲ್ಟ್‌ಗಳನ್ನು ಬೀದಿನಾಯಿಗಳ ಕೊರಳಿಗೆ ಹಾಕಲಾಗಿದೆ. ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರದೇಶಗಳಾದ ಸುರತ್ಕಲ್‌, ಕುಳಾಯಿ ಪ್ರದೇಶದ 200ಕ್ಕೂ ಅಧಿಕ ಬೀದಿನಾಯಿಗಳ ಕುತ್ತಿಗೆಗೆ ಈ ರಿಫ್ಲೆಕ್ಟಿಂಗ್‌ ಬೆಲ್ಟ್‌ ಹಾಕಲಾಗಿದೆ.

ನಗರದಲ್ಲಿ 500ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಈ ಬೆಲ್ಟ್ ಹಾಕಲಾಗಿದ್ದು, ಬೆಲ್ಟ್ ಹಾಕಿರುವ ಕಡೆ ಅಪಘಾತ ಸಂಖ್ಯೆ ಕಡಿಮೆಯಾಗಿದೆ. ಇನ್ನಷ್ಟು ನಾಯಿಗಳಿಗೆ ಅಳವಡಿಸುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮತ್ತೆ 100 ಬೆಲ್ಟ್‌ಗಳನ್ನು ತರಿಸಲಾಗಿದೆ. ಈ ಕಾರ್ಯವನ್ನು ಸದ್ಯ ಉಚಿತವಾಗಿಯೇ ಮಾಡುತ್ತಿದ್ದು, ಮುಂದೆ ಪ್ರಾಯೋಜಕರಿಂದ ಆರ್ಥಿಕ ನೆರವು ಪಡೆಯುವ ಯೋಚನೆಯಿದೆ ಎಂದು ತೌಸಿಫ್ ಹೇಳಿದ್ದಾರೆ.

ಕೆಂಪು, ನೀಲಿ, ಹಳದಿ, ನೇರಳೆ ಬಣ್ಣಗಳನ್ನು ಪ್ರತಿಫಲಿಸುವ ಕೊರಳ ಪಟ್ಟಿ ಶ್ವಾನಕ್ಕೆ ಅಂದ ನೀಡುತ್ತದೆ. ತಣ್ಣೀರುಬಾವಿ ಬೀಚ್‌ ಪ್ರದೇಶದಲ್ಲಿ ಹೆಚ್ಚು ನಾಯಿಗಳಿದ್ದು, ಅವುಗಳ ಕೊರಳಲ್ಲಿ ಈ ಪಟ್ಟಿ ಮಿನುಗುತ್ತಿವೆ. ಸ್ಥಳೀಯರು ಈ ವಿನೂತನ ಕ್ರಮಕ್ಕೆ ಮಂಗಳೂರು ನಗರದ ಜನರು ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.
ಇಂಧೋರ್‌ನಿಂದ ಬೆಲ್ಟ್‌: ಮಂಗಳೂರು ಅಸುಪಾಸಿನಲ್ಲಿ ಇಂತಹ ರಿಫ್ಲೆಕ್ಟಿಂಗ್‌ ಬೆಲ್ಟ್‌ ಸಿಗೋದಿಲ್ಲ. ಚೆನ್ನೈಯಲ್ಲಿ ಸಿಕ್ಕರೂ ತುಂಬಾ ದುಬಾರಿ. ಅದಕ್ಕಾಗಿ ಇಂಧೋರ್‌ನ ಎನ್‌ಜಿಒ ಸಂಸ್ಥೆಯವರು ಸಿದ್ಧಪಡಿಸುವ ರಿಫ್ಲೆಕ್ಟಿಂಗ್‌ ಬೆಲ್ಟ್‌ಗಳನ್ನು ತಲಾ 40 ರೂ.ನಂತೆ ಕೊಟ್ಟು ತರಿಸಿ ಕೊಂಡಿದ್ದೇವೆ. ಆರಂಭದಲ್ಲಿ ನಾನೇ ಖುದ್ದಾಗಿ ಖರೀದಿ ಮಾಡಿದೆ. ಈ ಬಳಿಕ ದಾನಿಗಳು ಕೆಲವೊಂದು ರಿಫ್ಲೆಕ್ಟಿಂಗ್‌ ಬೆಲ್ಟ್‌ಗೆ ಸಹಾಯ ಹಸ್ತ ನೀಡಿದರು ಎನ್ನುತ್ತಾರೆ ತೌಸೀಫ್‌.