ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಬಂಧನ ಭೀತಿ ಎದುರಾಗಿದೆ.

2016ರಲ್ಲಿ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಗಳಿಸಿದ್ದ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿನ ಹಾಡೊಂದಕ್ಕೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆ ರಕ್ಷಿತ್ ಶೆಟ್ಟಿ ಮಾಲಕತ್ವದ ಪರಮ್ವಾಹ್ ಸ್ಟುಡಿಯೋಸ್ ವಿರುದ್ಧ ದೂರು ದಾಖಲಿಸಿ ನ್ಯಾಯಾಲಯದ ಮೆಟ್ಟಿಲು ಏರಿತ್ತು.

ಕಾಪಿರೈಟ್‌ ಉಲ್ಲಂಘನೆ ಮಾಡಿ “ಕಿರಿಕ್‌ ಪಾರ್ಟಿ” ಸಿನಿಮಾದಲ್ಲಿ ಹಾಡು ಬಳಕೆ ಮಾಡಿದ ಆರೋಪ ಸಂಬಂಧ ವಿಚಾರಣೆಗೆ ಹಾಜರಾಗದ ನಟ ರಕ್ಷಿತ್‌ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ವಿರುದ್ಧ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ರಕ್ಷಿತ್ ಶೆಟ್ಟಿ , ಪರಮವ್ಹಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಲಹರಿ ಆಡಿಯೋ ಸಂಸ್ಥೆ ಕಾಪಿ ರೈಟ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿತ್ತು. ನಗರದ 9ನೇ ಎಸಿಎಂಎಂ ಕೋರ್ಟ್ ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.

ಆದರೆ ನಟ ರಕ್ಷಿತ್‌ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನ್ಯಾಯಾಲಯಕ್ಕೆ ನಿರಂತರವಾಗಿ ಗೈರು ಹಾಜರಾದ ಹಿನ್ನಲೆಯಲ್ಲಿ ಕೋರ್ಟ್ ಜಾಮೀನುರಹಿತ ಬಂಧನ ವಾರಂಟ್ ಜಾರಿ ಮಾಡಿದೆ.

2016ರ ಡಿಸೆಂಬರ್ 30ರಂದು ಬಿಡುಗಡೆ ಆದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಹೇಯ್‌ ಹೂ ಆರ್‌ ಯೂ (He who are you) ಹಾಡನ್ನು ಲಹರಿ ಸಂಸ್ಥೆಯ ಅನುಮತಿ ಇಲ್ಲದೆ ಬಳಸಲಾಗಿತ್ತು. ಶಾಂತಿ ಕ್ರಾಂತಿ ಸಿನಿಮಾದ ಈ ಹಾಡನ್ನು ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ಬಳಸಿಕೊಂಡಿದ್ದರಿಂದ ಲಹರಿ ಸಂಸ್ಥೆ 2017ರ ಜನವರಿ 11ರಂದು ದೂರು ದಾಖಲು ಮಾಡಿತ್ತು.