ನನಗೆ ಮುಖ್ಯಮಂತ್ರಿಯಾಗುವ ಯೋಗ ಬಂದರೆ ಯಾರು ತಡೆಯಲು ಸಾಧ್ಯವಿಲ್ಲ : ಎಚ್.ಡಿ ರೇವಣ್ಣ -Vishwanews24
ಬೆಂಗಳೂರು: ಮುಖ್ಯಮಂತ್ರಿಯಾಗುವ ಯೋಗ ಬಂದರೆ ಯಾರು ತಡೆಯಲು ಸಾಧ್ಯವಿಲ್ಲ. ಆದರೆ ಸದ್ಯಕ್ಕೆ ನಾನು ಸಚಿವನಾಗಿದ್ದೇನೆ. ಅಷ್ಟು ಸಾಕು. ನನಗೆ ಮುಖ್ಯಮಂತ್ರಿಯಾಗುವ ಆಸೆ ನನಗಿಲ್ಲವೆಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೇವಣ್ಣ, ನನ್ನದು ಸ್ವಾತಿ ನಕ್ಷತ್ರ. ನನ್ನ ಮೇಲೆ ಯಾರು ಮಾಟ ಮಂತ್ರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಚಿವ ರೇವಣ್ಣ ಹಾಗೂ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಜಿಲ್ಲಾಧಿಕಾರಿ ವಿರುದ್ಧ ರೇವಣ್ಣ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾಧಿಕಾರಿ ಹಾಗೂ ತಮ್ಮ ಮಧ್ಯೆ ಯಾವುದೇ ಗುದ್ದಾಟ ಇಲ್ಲ. ಯಾರ ಜೊತೆಯಲ್ಲಿಯೂ ಜಗಳ ಮಾಡಬೇಕಾದ ಅಗತ್ಯವೂ ಇಲ್ಲ.
ಬರನಿರ್ವಹಣೆ ಮಾಡಲು ಜಿಲ್ಲಾಡಳಿತ ಬಳಿ 10 ಕೋಟಿ ರೂ.ಗಿಂತಲೂ ಹೆಚ್ಚಿನ ಹಣವಿದೆ. ಅದನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರಲಿಲ್ಲ. ಜಿಲ್ಲಾಡಳಿತದಲ್ಲಿ ನಾನು ತಲೆ ಹಾಕಿಲ್ಲ. ಮಾಧ್ಯಮಗಳ ಮುಂದೆಯೇ ಬರ ಪರಿಹಾರ ಬಿಡುಗಡೆ ಮಾಡಲು ಹೇಳಿದ್ದೆ. ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಯಲ್ಲಿ ರೈತರಿಗೆ ಸಮಸ್ಯೆಯಾಗಬಾರದು. ಹಿಂದೆ ಇದೇ ಕಾರಣಕ್ಕಾಗಿ ಗೋಲಿಬಾರ್ ನಡೆದಿತ್ತು. ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಕಾರಣಗಳಿಂದ ಅವರ ಜೊತೆ ಹೊಡೆದಾಟ ಮಾಡಿಲ್ಲ ಎಂದು ರೇವಣ್ಣ ತಿಳಿಸಿದ್ದಾರೆ.
