ನನ್ನ ಸೋಲಿಗೆ ನೂರಕ್ಕೆ ನೂರರಷ್ಟು ಮೈತ್ರಿ ಕಾರಣ : ವೀರಪ್ಪ ಮೊಯಿಲಿ -Vishwanews24
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ 15 ರಿಂದ 16 ಸ್ಥಾನಗಳನ್ನು ಗೆಲುವು ಸಾಧಿಸುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈತ್ರಿ ಸರ್ಕಾರ ಜನರ ಭಾವನೆಗಳಿಗೆ ಸರಿಯಾಗಿ ಸ್ಪಂಧಿಸಿಲ್ಲ ಎಂದರು.
ನಾನು ಸೋತರೂ ಚಿಕ್ಕಬಳ್ಳಾಪುರದ ಜನರ ಮೇಲೆ ಪ್ರೀತಿ ವಿಶ್ವಾಸ ಮುಂದುವರಿಸುತ್ತೇನೆ. ಮುಂದೆ ಚುನಾವಣೆಗೆ ನಿಲ್ಲುತ್ತೇನೋ ಗೊತ್ತಿಲ್ಲ ಆದರೂ ಕ್ಷೇತ್ರದ ಜನರೊಂದಿಗೆ ಇರುತ್ತೇನೆ ಎಂದರು.
ಚುನಾವಣೆಯಲ್ಲಿ ನಮ್ಮವರಿಂದಲೂ ಮೋಸ ಆಯಿತು. ಅಧಿಕಾರ ಪಡೆಯುವ ಆಸೆಯಿಂದ ಮೋಸ ಮಾಡಿದ್ದಾರೆ. ಒಂದು ವೇಳೆ ಈ ಬಾರಿ ರಾಜ್ಯದಲ್ಲಿ ಮೈತ್ರಿ ಇಲ್ಲದೆ ಇದ್ದಿದ್ದರೆ 15 ರಿಂದ 16 ಸ್ಥಾನ ಖಂಡಿತಾ ಗೆಲ್ಲುತ್ತಿದ್ದೆವು. ಚಿಕ್ಕಬಳ್ಳಾಪುರದಲ್ಲಿ ನನ್ನ ಸೋಲಿಗೆ ನೂರಕ್ಕೆ ನೂರರಷ್ಟು ಮೈತ್ರಿಯೇ ಕಾರಣ ಎಂದು ಹೇಳಿದರು.
ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರು ಇಂದು ಒಂದು ಹೇಳಿಕೆ ಕೊಡುತ್ತಾರೆ. ನಾಳೆ ಅದಕ್ಕೆ ವ್ಯತಿರಿಕ್ತವಾದ ಹೇಳಿಕೆ ಕೊಡುತ್ತಾರೆ. ಆದರೆ, ನಾನು ದೇವೇಗೌಡರ ರೀತಿ ಹೇಳಿಕೆ ಕೊಡುವುದಿಲ್ಲ. ನಾನು ಕೊಟ್ಟ ಹೇಳಿಕೆಯನ್ನು ವಾಪಸ್ ಪಡೆಯುವುದಿಲ್ಲ. ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಮೊಯ್ಲಿ ಹೇಳಿದರು.
