“ನಮ್ಮ ಅಮೂಲ್ಯ ಮತಕ್ಕೆ ಬೆಲೆ ಸಿಗುವಂತೆ ಮತದಾನ ಮಾಡೋಣ”

Featured, ರಾಜ್ಯ ನ್ಯೂಸ್

ಹೌದು ಚುನಾವಣೆಯೆಂಬ ಹಬ್ಬಕ್ಕೆ ದಿನಗಣನೆ ಶುರುವಾಗಿದೆ ಅಂದರೆ ಮೇ 12 ಕ್ಕೆ ಚುನಾವಣೆ ಹಾಗೂ ಅದೇ ತಿಂಗಳ 15 ಕ್ಕೆ ಫಲಿತಾಂಶ ಅದಕ್ಕೆ ಈ ಬಾರಿಯಾದರೂ ನಮ್ಮ ಅಮೂಲ್ಯ ಮತಕ್ಕೆ ಬೆಲೆ ಸಿಗುವಂತೆ ಮತದಾನ ಮಾಡೋಣ. ಅಳಿವು-ಉಳಿವಿನ ಪ್ರಶ್ನೆಯಾಗಿರುವ ಮಹತ್ವದ ಚುನಾವಣೆಗೆ ಎಲ್ಲ ಪಕ್ಷಗಳು ಹಾಗೂ ಪಕ್ಷದ ಅಭ್ಯರ್ಥಿಗಳು ಅಂತಿಮಹಂತದ ಸಿದ್ಧತೆ ನಡೆಸಿವೆ.

ಇದರ ಮಧ್ಯ ಮತದಾರರ ಜವಾಬ್ದಾರಿ ಏನೆಂದರೆ ರಾಜಕೀಯ ಪಕ್ಷಗಳು ನೀಡುವ ಯಾವುದೇ ಆಮಿಷಕ್ಕೆ ಆಸೆಪಡದೆ ಒಬ್ಬ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು. ಅಂದರೆ ಬರಿ ಆಶ್ವಾಸನೆಗಳನ್ನೇ ನೀಡುತ್ತಾ ಬಂದಿರುವ ಜನಪ್ರತಿನಿಧಿಗಳ ಕೈಬಿಟ್ಟು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಾಗಿ ಒಳ್ಳೆಯ ಕೆಲಸ ಮಾಡುವ ಹಾಗು ಮಾಡಿಕೊಂಡು ಬಂದ ಜನಪ್ರತಿನಿಧಿಯನ್ನು ಆಯ್ಕೆಮಾಡಬೇಕು. ಪ್ರಸ್ತುತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ವಾಕ್ಯವನ್ನು ಹೇಳುತ್ತಿದ್ದಾರೆ “ಯುವಜನತೆ ದೇಶದ ಶಕ್ತಿ” ಎಂದು ಈ ಮಾತಲ್ಲಿ ತುಂಬಾ ಶಕ್ತಿ ಇದೆ ಅದೇನೆಂದರೆ ಭಾರತದ ಸುಮಾರು 85 ಕೋಟಿ ಮತದಾರರ ಪೈಕಿ ಅರ್ಧದಷ್ಟು 35 ವರ್ಷದೊಳಗಿನ ಯುವ ಮತದಾರರಿದ್ದಾರೆ ಹಾಗಾಗಿ ರಾಜಕಾರಣಿಗಳ ಭವಿಷ್ಯ ನಿರ್ಧರಿಸುವ ಶಕ್ತಿ ಯುವ ಭಾರತದ ಕೈಯಲ್ಲಿದೆ.

ಹಾಗಾಗಿ ರಾಜಕೀಯ ಪಕ್ಷಗಳು ಯುವ ಮತದಾರರಿಗೆ ಮಣೆ ಹಾಕುತ್ತಿವೆ. ನಮ್ಮ ರಾಜ್ಯದಲ್ಲಿ ಈ ವರ್ಷದ ಮತದಾರರ ಸಂಖ್ಯೆ ಸುಮಾರು 5 ಕೋಟಿ ಇವರ ಪೈಕಿ ಅರ್ಧದಷ್ಟು ಯುವ ಮತದಾರರೇ ಇರುವರು ಅದರಲ್ಲೂ ಸುಮಾರು 65 ಲಕ್ಷ ಮಂದಿ ಮೊದಲ ಬಾರಿಗೆ ತಮ್ಮ ಮತವನ್ನು ಚಲಾಯಿಸಲಿದ್ದಾರೆ. ಸುಮಾರು 2.5 ಕೋಟಿ ಮತಗಳು ಯುವಜನರ ಕೈಯಲ್ಲಿವೆ ಈ ಯುವ ಮತದಾರರ ಮತಗಳು ಸೂಕ್ತರೀತಿಯಲ್ಲಿ ಚಲಾವಣೆ ಗೊಂಡರೆ ಮಾದರಿ ರಾಜ್ಯ ನಿರ್ಮಿಸಬಹುದು. ರೈತರ ಸಮಸ್ಯೆ, ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದ ಇವೆಲ್ಲವನ್ನು ತಡೆದು ಇವುಗಳಿಗೆ ಸೂಕ್ತ ಪರಿಹಾರ ಕಂಡು ಕೊಳ್ಳಬೇಕೆಂದರೆ ಇವೆಲ್ಲವನ್ನು ಅಸ್ತ್ರಗಳನ್ನಾಗಿ ಮಾಡಿಕೊಂಡು ಜಾತಿ ಧರ್ಮ ಸಂಘಟನೆಗಳ ಆಧಾರದ ಮೇಲೆ ನಾಟಕೀಯ ರಾಜಕೀಯ ಮಾಡುವ ರಾಜಕಾರಣಿಗಳಿಗೆ ಬೆಂಬಲ ನೀಡಬಾರದು. ಅಧಿಕಾರ ಎಂಬ ಮೋಹ ಬಿಟ್ಟು ನನ್ನ ರಾಜ್ಯ ನನ್ನ ಜನ ಎಂದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಪ್ರಜಾಪ್ರಭುತ್ವವನ್ನು ಉಳಿಸಿ-ಬೆಳೆಸುವ ಅಭ್ಯರ್ಥಿಗಳಿಗೆ ನಮ್ಮ ಮತ ನೀಡಬೇಕು. ನಾವು ಸಜ್ಜನರಂತೆ ಕುಳಿತುಕೊಂಡರೆ ನಮ್ಮ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ ಈ ಬಾರಿಯಾದರೂ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಒಬ್ಬ ಅತ್ಯುತ್ತಮ ಜನ ಸೇವಕನನ್ನು ಆಯ್ಕೆ ಮಾಡೋಣ.