ನಮ್ಮ ಮೇಲೆ ತಂದೆ-ತಾಯಿ ಆಶೀರ್ವಾದ ಇದೆ ; ದೈವಾನುಗ್ರಹ ಇರುವುದರಿಂದ ನನಗೆ ಯಾರ ಭಯವೂ ಇಲ್ಲ : ಎಚ್.ಡಿ.ರೇವಣ್ಣ -Vishwanews24
ಬೆಂಗಳೂರು: ಸಚಿವ ಎಚ್.ಡಿ.ರೇವಣ್ಣ ಇಂದು ಸುದ್ದಿಗೋಷ್ಠಿ ನಡೆಸಿ, ತಮ್ಮ ಇಲಾಖೆಯಿಂದ ಆದ ಕೆಲಸಗಳನ್ನು ತಿಳಿಸಿದ್ದಾರೆ. ಅಲ್ಲದೆ, ಅತೃಪ್ತ ಶಾಸಕರನ್ನು ವಾಪಸ್ ಬರುವಂತೆ ಮನವಿ ಮಾಡಿದ್ದಾರೆ.
ಇವತ್ತಿನ ಸ್ಥಿತಿಗೆ ನಾನೇ ಕಾರಣ ಎನ್ನುತ್ತಾರೆ. ಆದರೆ, ಖಂಡಿತ ನನ್ನ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳ ಕಡೆ ಗಮನ ಹರಿಸಿಲ್ಲ. ಯಾವುದೇ ಅಧಿಕಾರಿಗಳ ವರ್ಗಾವಣೆಯಲ್ಲಿ ತಲೆ ಹಾಕಿಲ್ಲ. ಪ್ರತಿದಿನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ಇದು ದೇವರು ಕೊಟ್ಟ ಸರ್ಕಾರ. ಈ ಸರ್ಕಾರ ಉಳಿದರೆ ಬಡವರಿಗೆ ಅನುಕೂಲ ಆಗುತ್ತದೆ. ಇಂದಿನ ಸ್ಥಿತಿಗೆ ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿದ ರೇವಣ್ಣ, ನನ್ನಿಂದ ತಪ್ಪು ಆಗಿದ್ರೆ ಕ್ಷಮಿಸಿ ವಾಪಸ್ ಬನ್ನಿ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮನವಿ ಮಾಡಿದರು.
ನನ್ನ ತಂದೆ-ತಾಯಿ ಆಶೀರ್ವಾದ, ಕುಲದೇವರು ರಂಗನಾಥ ಸ್ವಾಮಿಯ ಆಶೀರ್ವಾದ ಇರುವ ವರೆಗೂ ಯಾರೂ ನನಗೇನೂ ಮಾಡಲಾರರು’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ರೇವಣ್ಣ ಹೇಳಿದರು.
ಎಚ್.ಡಿ.ರೇವಣ್ಣ ಮತ್ತು ಕುಮಾರಸ್ವಾಮಿ ಹೊಡೆದಾಡುತ್ತಾರೆ ಎಂಬುದೆಲ್ಲ ಕನಸು. ನನ್ನ ಮೇಲೆ ತಂದೆ-ತಾಯಿ ಆಶೀರ್ವಾದ ಇದೆ. ನಾನು ಈ ಮಟ್ಟಕ್ಕೆ ಬೆಳೆದದ್ದು ಅವರ ಆಶೀರ್ವಾದದಿಂದಲೇ. ನಾನು ಯಾವ ಶಾಸಕರ ಮನಸನ್ನೂ ನೋಯಿಸಿಲ್ಲ ಎಂದು ಹೇಳಿದರು.

