ಮಹಾವಿಷ್ಣು, ಮಹಾಕಾಳಿಯರು ಒಂದೆಡೆ ನೆಲೆಸಿರುವ ಅಪರೂಪದ ಪುಣ್ಯಕ್ಷೇತ್ರವೇ ಉಡುಪಿಯ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಾಲಯ -Vishwanews24

Featured, ವಿಶೇಷ ಲೇಖನಗಳು

ಉಡುಪಿ:ನಾಡಿನ ಪ್ರಮುಖ ದೇವಳಗಳಲ್ಲಿಒಂದಾದ  ಮಹಾವಿಷ್ಣು, ಮಹಾಕಾಳಿಯರು ಒಂದೆಡೆ ನೆಲೆಸಿರುವ ಅಪರೂಪದ ಪುಣ್ಯಕ್ಷೇತ್ರವೇ ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಾಲಯ.

 

ಇತಿಹಾಸ: ೭-೮ ಶತಮಾನಗಳ ಹಿಂದೆ ಎಂಟುಗ್ರಾನಗಳ ಕೂಟವಾದ ನಿಡಂಬೂರು ಮಾಗಣೆ ಯನ್ನು ಬಂಗ ವಂಶದ ಜೈನ ಬಲ್ಲಾಳರು ಆಳುತ್ತಿದ್ದರು. ಈ ರಾಜ ಬಲ್ಲಾಳರು ವಾಸಿಸುವ ಸ್ಥಳವನ್ನು ಆಗ ನಿಡಂಬೂರುಬೀಡು ಎಂದು ಕರೆಯುತ್ತಿದ್ದರು. ಇವರು ಆಳುತ್ತಿದ್ದ ರಾಜ್ಯದ ವ್ಯಾಪ್ತಿಯು ತುಂಬಾ ದೊಡ್ಡದಾಗಿತ್ತು. ದಕ್ಷಿಣದಲ್ಲಿ ಉದ್ಯಾವರ ನದಿಯು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದವರೆಗೂ ಉತ್ತರಕ್ಕೆ ಕಲ್ಯಾಣಪುರ ನದಿಯವರೆಗೂ ಪೂರ್ವಕ್ಕೆ ಮಣಿಪಾಲ ಬೆಟ್ಟದವರೆಗೂ ಅವರ ಆಡಳಿತವನ್ನು ವಿಸ್ತರಿಸಿದ್ದರು. ಈ ಜೈನ ಬಲ್ಲಾಳರು ಶಕ್ತಿ ದೇವತೆಯನ್ನು ಪೂಜಿಸುತ್ತಿದ್ದರು. ಈ ದೇವರನ್ನು ಸ್ಥಳದ ದೇವತೆ ಎಂದು ನಂಬಿದ್ದರು. ಈ ಸ್ಥಳದ ದೇವತೆ ಶ್ರೀ ಮಹಾಕಾಳಿ. ಸಾವಿರಾರು ವರ್ಷಗಳ ಹಿಂದೆ ಈ ಭಾಗದವರು ಶಕ್ತಿಯನ್ನು ಪೂಜಿಸುತ್ತಿದ್ದರು. ಆದ್ದರಿಂದ ಈ ಸುತ್ತಮುತ್ತಲಿನ ಪ್ರದೇಶವು ಶಕ್ತಿಂದ ಕೂಡಿದೆ ಎಂಬ ನಂಬಿಕೆ ಇದೆ. ಬಲ್ಲಾಳರು ಈ ದೇವತೆಯನ್ನು ತಮ್ಮ ಕಾಲದ ದೇವತೆಯಾಗಿ ನಿರ್ಧರಿಸಿದರು.ಇತಿಹಾಸದ ಪ್ರಕಾರ ಬಲ್ಲಾಳ ರಾಜನ ಮಗ ಜೀವನದಲ್ಲಿ ಜಿಗುಪ್ಸೆ ಹೊಂದಿ ಜೈನ ಸನ್ಯಾಸಿಯಾದನು. ಅವನು ನಂತರ ಸಿಗಲಿಲ್ಲ. ಆಗ ರಾಜನು ಡಂಗುರವನ್ನು ಹೊಡೆಸಿ ತನ್ನ ಮಗನನ್ನು ಕರೆತಂದವರಿಗೆ ಬಹುಮಾನ ನೀಡಲಾಗುವುದು ಎಂದನು. ಆ ಮಗನನ್ನು ಈ ಉಡುಪ ಕುಲದವರು ಹುಡುಕಿ ಕರೆತಂದರು.

ತಂಪಾದ ತೆಂಗಿನಮರಗಿಡಗಳ ಮಧ್ಯೆ ತಾಯಿ ಮಹಾಕಾಳಿಯನ್ನು ಆರಾಧಿಸುತ್ತಿದ್ದ ಸ್ಥಳವೇ ಅಮ್ಮನ ಆವಾಸಸ್ಥಾನವಾಯಿತು. ಇದೆ ಮಹಾಕಾಳಿ ಗುಡಿಯ ಸಮೀಪದ ನಿಡಂಬೂರು ಬೀಡು ಎಂಬ ಅರಮನೆಯಲ್ಲಿ ಎಂಟು ಗ್ರಾಮಗಳ ಕೂಟವಾದ ನಿಡಂಬೂರು ಸಂಸ್ಥಾನವನ್ನು ಆಳುತ್ತಿದ್ದ ಬಂಗವಂಶದ ಜೈನರು ಈ ತಾಯಿಯ ಕ್ಷೇತ್ರವನ್ನು ಅಂಬಲಪಾಡಿ ಎಂದು ಕರೆದರೂ. ಬಂಗವಂಶದ ಕೊನೆಯ ರಾಜ ಜೈನ ದೀಕ್ಷೆಯನ್ನು ತೊಟ್ಟ ನಂತರ ಸರ್ವಸ್ವವನ್ನು ತನ್ನ ವಂಶಕ್ಕೆ ಉಪಕಾರ ಮಾಡಿದ ಕಂದಾವರ ಉಡುಪ ಕುಟುಂಬಕ್ಕೆ ಕೊಟ್ಟನು. ನಂತರ ಉಡುಪರು ಬಲ್ಲಾಳರಾಗಿ ಇದೆ ಉಡುಪ ಕುಲದ ಹಿರಿಯ ಶ್ರೀಧರ ನಿಡಂಬೂರಾಯರು ತಮ್ಮ ಪೂರ್ವಜರು ಆರಾಧಿಸುತ್ತಿದ್ದ ಶ್ರೀ ಜನಾರ್ಧನ ವಿಗ್ರಹವನ್ನು ಮಹಾಕಾಳಿಯ ಗುಡಿಯ ಬಳಿ ಸ್ಥಾಪಿಸಿ ವಿಷ್ಣುವಿನ ಮೂಲಕ ವಿಷ್ಣುಮಾಯೆಯನ್ನು ಜೊತೆಯಾಗಿ ಆರಾಧಿಸಿದರು. ಮುಂದೆ ಜನಮನದಲ್ಲೂ ಶ್ರೀ ಜನಾರ್ಧನ ಸಹಿತ ಮಹಾಕಾಳಿಯ ಅಪರೂಪದ ಆರಾಧನಾ ಪದ್ದತಿಯು ಬೆಳೆದು ಬಂತು.

ದಕ್ಷಿಣ ಕನ್ನಡದ ಆಗಮೋಕ್ತ ದೇವಸ್ಥಾನಗಳ ಲಕ್ಷಣಗಳಾದ ಗರ್ಭಗುಡಿ, ತೀರ್ಥ ಮಂಟಪ, ಪ್ರದಕ್ಷಿಣಾ ಪಥ, ದೊಡ್ಡ ಬಲಿಕಲ್ಲು, ಧ್ವಜ ಸ್ತಂಭ, ವಿಸ್ತಾರವಾದ ಹೊರ ಪ್ರಾಂಗಣ, ಮುಖಮಂಟಪ, ಗೋಪುರಗಳನ್ನು ಒಳಗೊಂಡಿವೆ. ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಒಂದೇ ಆವರಣದಲ್ಲಿರುವುದು ಇಲ್ಲಿನ ವಿಶೇಷ. ದೇವಸ್ಥಾನದ ಆಡಳಿತವನ್ನು ‘ಬಲಾಳ’ ವಂಶದವರು ನೋಡಿಕೊಳ್ಳುತ್ತಾರೆ.  ಮಾಘ ಶುದ್ಧ ದ್ವಾದಶಿಯಿಂದ ಕೃಷ್ಣ ಪಕ್ಷದ ಪಂಚಮಿಯವರೆಗೆ ವರ್ಷಾವಧಿ ಇಲ್ಲಿ ಉತ್ಸವವಿರುತ್ತದೆ. ಮಾಘ ಪೌರ್ಣಮಿ ದಿನ ಧ್ವಜಾರೋಹಣ, ಕೃಷ್ಣ ತದಿಗೆ ದಿನ ರಥೋತ್ಸವ ಇಲ್ಲಿನ ಮುಖ್ಯಹಬ್ಬ. ರಥೋತ್ಸವದ ದಿನ ರಥಾರೂಢನಾಗಿ ಬರುವ ಜನಾರ್ದನನನ್ನು ತಾಯಿ ಮಹಾ ಕಾಳಿ ಸ್ವಾಗತಿಸಿ ಒಳಕ್ಕೆ ಕರೆದುಕೊಂಡು ಬಂದು, ಜನಾರ್ದನ ಉತ್ಸವ ಮೂರ್ತಿಯನ್ನು ಹೊತ್ತವರ ಸಮ್ಮುಖದಲ್ಲಿ ಮಹಾಕಾಳಿಯ ಆವೇಶ ಪಡೆದ ಪಾತ್ರಿಯು ಸಂಭ್ರಮದಿಂದ ನರ್ತಿಸುವುದು ಈ ಉತ್ಸವದ ದೊಡ್ಡ ಆಕರ್ಷಣೆ. ಇನ್ನುಳಿದಂತೆ ನವರಾತ್ರಿ ಇಲ್ಲಿನ ದೊಡ್ಡ ಹಬ್ಬ. ದೇವತಾ ವಿಗ್ರಹಗಳು ಸಾಮಾನ್ಯವಾಗಿ ಪೂರ್ವಾಭಿಮುಖವಾಗಿ ಇರುತ್ತವೆ. ಅಂಬಲಪಾಡಿಯಲ್ಲಿ ಮಹಾಕಾಳಿ ಪಶ್ಚಿಮಾಭಿಮುಖವಾಗಿ ನಿಂತಿದ್ದಾಳೆ. ಶಂಖ, ಚಕ್ರ, ಖಡ್ಗ, ಪಾನಪಾತ್ರೆ ಹಿಡಿದು ರಾಕ್ಷಸರ ರುಂಡಮಾಲೆ ಧರಿಸಿ ರಕ್ತಬೀಜಾಸುರನ ನೆತ್ತರಿಗೆ ನಾಲಿಗೆ ಚಾಚಿ ನಿಂತಿರುವ ಆರು ಅಡಿ ಎತ್ತರದ ವಿಗ್ರಹ  ಆಕರ್ಷಕವಾಗಿದೆ. ಕಾಳಿ ಅಮ್ಮನ ಗುಡಿ ಇಪ್ಪತ್ತೆರಡು ಕಂಬಗಳ ವೈಭವದ ಮಂದಿರ. ಮಹಾಕಾಳಿ ಗುಡಿಯ ವಠಾರದಲ್ಲಿ ಶಾಸ್ತಾವು, ಪಂಜುರ್ಲಿ, ಕಲ್ಕುಟಿಗ ಇತ್ಯಾದಿ ದೈವ ದೇವತೆಗಳು, ನವಗ್ರಹಗಳು ಹಾಗೂ ನವಗ್ರಹ ವೃಕ್ಷಗಳಿವೆ.

ಚೋಳಕಾಲದ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿರುವ ಶ್ರೀ ಜನಾರ್ಧನ ಸ್ವಾಮಿಯ ದೇಗುಲವು ಬಹುತೇಕ ಕಂಬಗಳ ಮೇಲೆಯೇ ನಿಂತಿದೆ.ಶಂಖ ಚಕ್ರ ಗಾಢಾಧಾರಿ ಶ್ರೀ ಜನಾರ್ಧನ ಸ್ವಾಮಿಯ ವಿಗ್ರಹವು ಅತಿ ಸುಂದರವಾಗಿದೆ. ಇಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಗಳ ಮಾದರಿಯ ಹೆಂಚು, ಗರ್ಭಗುಡಿ, ತೀರ್ಥಮಂಟಪ, ಪ್ರದಕ್ಷಿಣಾ ಪಥ, ದೊಡ್ಡ ಬಲಿಕಲ್ಲು, ಧ್ವಜ ಕಂಬ, ವಿಸ್ತಾರವಾದ ಹೊರ ಪ್ರಾಂಗಣ, ಮುಖ ಮಂಟಪ ಹಾಗು ಗೋಪುರಗಳಿವೆ.

ಮಾಘ ಶುದ್ಧ ದ್ವಾದಶಿಯಿಂದ ಪಂಚಮಿಯ ದಿನಗಳಲ್ಲಿ ಉತ್ಸವಗಳು ನಡೆದು ಬಹುಳ ತದಿಗೆಯಂದು ರಥೋತ್ಸವವು ನಡೆಯುತ್ತದೆ. ಮಹಾಕಾಳಿಯ ವಿಗ್ರಹವಂತೂ ದುಸ್ತರನ್ನು ಶಿಕ್ಷಿಸುವ, ಶಿಷ್ಟರಿಗೆ ಅಭಯಹಸ್ತ ನೀಡುವಂತೆ ಭಾಸವಾಗುತ್ತದೆ. ಅಂಬಲಪಾಡಿಯ ಮಹಾಕಾಳಿಯು ಪಶ್ಚಿಮಕ್ಕೆ ತಿರುಗಿ ನಿಂತಿರುವುದು ವಿಶೇಷವಾಗಿದೆ. ಶಂಖ,ಚಕ್ರ,ಖಡ್ಗ,ಪಾನಪಾತ್ರೆ ಹಿಡಿದು ರಾಕ್ಷಸರ ರುಂಡ ಮಾಲೆ ಧರಿಸಿ ನೆತ್ತರಿಗೆ ನಾಲಿಗೆ ಚಾಚಿ ನಿಂತಿರುವ ಆಳೆತ್ತರದ ಭಂಗಿಯು ಅತ್ಯಂತ ಮನೋಜ್ಞವಾಗಿದೆ.

ಇಲ್ಲಿಯ ಜನಾರ್ಧನ ದೇಗುಲದ ತೀರ್ಥ ಮಂಟಪದ ಕಂಬಗಳು ಹನುಮಂತ,ಗಣಪತಿ,ನಾಗದೇವತೆಗಳ ಸುಂದರ ಕೆತ್ತನೆಯಿಂದ ಅಲಂಕೃತಗೊಂಡಿವೆ.ಇನ್ನು ಮಹಾಕಾಳಿಯ ಗರ್ಭಗುಡಿಯ ಇಕ್ಕೆಲಗಳಲ್ಲಿ ದೇವಿಯ ವಿವಿಧ ಅವತಾರಗಳಾದ ಶ್ರೀ ದುರ್ಗಾ,ಶ್ರೀ ಆರ್ಯ ದುರ್ಗಾ, ಮಹಿಷಾಸುರ ಮರ್ಧಿನಿ ಯಾ ಶಿಲೆಗಳನ್ನು ಕಾಣಬಹುದು. ನವಗ್ರಹ ಗುಡಿ ಮತ್ತು ನವಗ್ರಹ ವೃಕ್ಷವನವು ಇಲ್ಲಿದೆ. ಪ್ರತಿ ಶುಕ್ರವಾರ ಸಾರ್ವಜನಿಕ ಭೋಜನ ಪ್ರಸಾದದ ವ್ಯವಸ್ಥೆ ಇದ್ದು ಸುಮಾರು ಎರಡು ಸಾವಿರ ಶಾಲಾ ಮಕ್ಕಳಿಗೆ ಭೋಜನ ನೀಡಲಾಗುತ್ತದೆ.

‘ದರ್ಶನ’ ಸೇವಾ ವಿಶೇಷ: ಪ್ರತಿ ಶುಕ್ರವಾರ ದೇವಿಯ ಆವೇಶ ಪಡೆದ ‘ಪಾತ್ರಿ’ಯ ಮೂಲಕ  ನಡೆಯುವ ‘ಪ್ರಶ್ನೋತ್ತರ’ ಇಲ್ಲಿ ಶತಮಾನಗಳಿಂದ ಬಂದ ‘ದರ್ಶನ’ ಪದ್ಧತಿ.

ಶುಕ್ರವಾರ ಸಂಜೆ 5.30ಕ್ಕೆ ಪ್ರಾರಂಭವಾಗುವ ದರ್ಶನ ರಾತ್ರಿ 8 ಗಂಟೆಯವರೆಗೆ ನಡೆಯುತ್ತದೆ. ಭಕ್ತರು ತಮ್ಮ ಸಂದೇಹ, ಭಯ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಈ ಸಂದರ್ಭದಲ್ಲಿ ಬಗೆ ಹರಿಸಿಕೊಳ್ಳಬಹುದು. ಶುಕ್ರವಾರ ಬೆಳಿಗ್ಗೆ 7.30ರಿಂದ 9 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ದಿನಕ್ಕೆ 30 ಜನರಿಗೆ ಮಾತ್ರ ಅವಕಾಶವಿದೆ. ಸಂಜೆ ಪ್ರಶ್ನೋತ್ತರ ನಡೆಯುತ್ತದೆ. ಇಷ್ಟಾರ್ಥ ಸಿದ್ಧಿಗೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ‘ಮಹಾ ಚಂಡಿಕಾಯಾಗ’ ಇಲ್ಲಿ ನಡೆಯುವ ನಿರಂತರ ಧಾರ್ಮಿಕ ಕಾರ್ಯಕ್ರಮ. ಯಾಗಕ್ಕೆ ನಿಗದಿಯಾದ ಹಣ ಪಾವತಿ ಮಾಡಿದರೆ ಅದರ ಸಿದ್ಧತೆಗಳನ್ನು ಇಲ್ಲಿನ ಅರ್ಚಕರೇ ನಿರ್ವಹಿಸುತ್ತಾರೆ. (ಶುಕ್ರವಾರ ಹಾಗೂ ಏಕಾದಶಿ ದಿನ ಚಂಡಿಕಾಯಾಗ ಮಾಡಿಸುವುದಿಲ್ಲ)

ಬೆಳಿಗ್ಗೆ 5 ಗಂಟೆಗೆ ದೇವಳದ ಬಾಗಿಲು ತೆರೆಯುತ್ತದೆ. ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಬಾಗಿಲು ಮುಚ್ಚುತ್ತಾರೆ. ನಂತರ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಸವಾಹನಗಳಿಗೆ ಪೂಜೆ, ಸಮಾರಾಧನೆ, ಸರ್ವಸೇವೆ,‘ಹೂವಿನ ಪೂಜೆ’ ಹಾಗೂ ಉತ್ತಮ ಕಲ್ಪ ‘ಹೂವಿನ ಪೂಜೆ’ ಇತ್ಯಾದಿ 28ಕ್ಕೂ ಹೆಚ್ಚು ಸೇವೆಗಳು ಈ ದೇವಸ್ಥಾನದಲ್ಲಿ ನಡೆಯುತ್ತವೆ.  ಭಕ್ತರು ತಮ್ಮ ಹೆಸರು, ವಿಳಾಸವನ್ನು ದೇವಸ್ಥಾನದ ಪುಸ್ತಕದಲ್ಲಿ ಒಮ್ಮೆ ನೋಂದಾಯಿಸಿದರೆ ಅವರಿಗೆ ನಿರಂತರವಾಗಿ ವರ್ಷಕ್ಕೊಮ್ಮೆ ಪ್ರಸಾದ ಕಳುಹಿಸುವ ವ್ಯವಸ್ಥೆ ಇಲ್ಲಿದೆ.

ಸೇವಾ ವಿವರಗಳಿಗೆ ದೇವಸ್ಥಾನದ ಕಚೇರಿ ದೂರವಾಣಿ 0820-2520871 ಸಂಪರ್ಕಿಸಬಹುದು. ಪ್ರತಿ ಶುಕ್ರವಾರ ಮಾತ್ರ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಇದೆ. ಅಲ್ಲದೇ ಸ್ಥಳೀಯ ಎರಡು ಸಾವಿರ ಶಾಲಾ ಮಕ್ಕಳಿಗೆ ಆ ದಿನ ಊಟದ ಪ್ರಸಾದ ನೀಡಲಾಗುತ್ತದೆ.

ಈ ದೇವಸ್ಥಾನದ ಆವರಣದಲ್ಲಿ ಯಾವುದೇ ಖಾಸಗಿ ಶುಭ ಸಮಾರಂಭ (ಮದುವೆ, ಮುಂಜಿ ಇತ್ಯಾದಿ)ಗಳಿಗೆ ಅವಕಾಶವಿಲ್ಲ.

ಭಕ್ತರಿಂದ ಪತ್ರ: ಪ್ರತಿ ವರ್ಷ ಅಂಚೆ ಮೂಲಕ 10ರಿಂದ 15 ಸಾವಿರ ಮನಿಯಾರ್ಡರ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ  ಪತ್ರಗಳು ದೇವಸ್ಥಾನಕ್ಕೆ ಬರುತ್ತವೆ. ತಮ್ಮ ಕಷ್ಟಗಳನ್ನು ಯಾರಲ್ಲೂ ಹೇಳಿಕೊಳ್ಳಲಾಗದವರು ಇಲ್ಲಿಗೆ ಪತ್ರ ಬರೆದುಕೊಳ್ಳುತ್ತಾರೆ. ಈ ಎಲ್ಲ ಪತ್ರಗಳಿಗೆ ದೇವಸ್ಥಾನದಿಂದ ಉತ್ತರ ಬರೆದು ಪ್ರಸಾದವನ್ನು ಭಕ್ತರಿಗೆ ಕಳುಹಿಸಿ ಕೊಡುವ ಸಂಪ್ರದಾಯವಿದೆ.

ಉಡುಪಿಯ ಶ್ರೀ ಕೃಷ್ಣಮಠದಿಂದ ಕೇವಲ ೨ ಕಿಮೀ ದೂರದಲ್ಲಿರುವ ಈ ಸನ್ನಿಧಿಯು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿದೆ. ದೇಗುಲವು ನಿತ್ಯ ಬೆಳಿಗ್ಗೆ ೫ರಿಂದ ಮಧ್ಯಾಹ್ನ ೧೨.೩೦ ಮತ್ತು ೩ರಿಂದ ರಾತ್ರಿ ೮ ರ ವರೆಗೂ ತೆರೆದಿರುತ್ತದೆ.

ಉಡುಪಿಯ ಶ್ರೀಕೃಷ್ಣಮಠಕ್ಕೆ ಬಂದವರು ಅಲ್ಲಿಂದ ಒಂದೂವರೆ ಕಿಮೀ ದೂರದಲ್ಲಿರುವ (ಉಡುಪಿ-ಮಂಗಳೂರಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ -17ರಲ್ಲಿ) ಅಂಬಲಪಾಡಿ ದೇವಸ್ಥಾನಕ್ಕೆ ಹೋಗದೆ ಹಿಂದಿರುಗುವುದಿಲ್ಲ. ಚೋಳರ ಕಾಲದ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದ ಕಟ್ಟಡದಲ್ಲಿ  ಅಲ್ಲಲ್ಲಿ ಇರುವ ಕೆತ್ತನೆಗಳು ಜೈನ ಧರ್ಮದ ಸಂಕೇತಗಳನ್ನು ಪ್ರತಿನಿಧಿಸುತ್ತವೆ. ಶಂಖ,ಚಕ್ರ, ಗಧಾ ಪದ್ಮಧಾರಿ ಜನಾರ್ದನ ವಿಗ್ರಹ ಅತ್ಯಂತ ಸುಂದರವಾಗಿದೆ.