ನಾನು ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕೆ ಹೆಮ್ಮೆ ಇದೆ. ಆ ಹೆಮ್ಮೆ ಬಂದಿರೊದೇ ಮೋದಿಯವರಿಂದ : ಶುೃತಿ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ತುಮಕೂರು: ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರ ರಚನೆಯಾಯಿತಾದರೂ ಈ ಪಕ್ಷಗಳ ನಾಯಕರು ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದು ಅಭಿವೃದ್ಧಿಯನ್ನು ಮರೆತಿದ್ದಾರೆ ಚಿತ್ರನಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ಎಂದು ಆರೋಪಿಸಿದರು.

ನಾವೆಲ್ಲರೂ ಕೇಂದ್ರದಲ್ಲಿ ಅತಂತ್ರಸ್ಥಿತಿಗೆ ಅವಕಾಶ ನೀಡದೆ ಮೋದಿಯವರು ಮತ್ತೆ ಪ್ರಧಾನಿಯಾಗಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ನಗರದಲ್ಲಿ ನಡೆದ ಮೇ ಬಿ ಚೌಕಿದಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆ, ಮಹಿಳೆಯರ ರಕ್ಷಣೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಿರ್ಮಲಾ ಸೀತಾರಾಮನ್ ಅವರನ್ನು ರಕ್ಷಣಾ ಸಚಿವರನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೇಮಕ ಮಾಡಿರುವುದು ಅವರಿಗೆ ಮಹಿಳೆಯ ಶಕ್ತಿಯ ಬಗ್ಗೆ ಇರುವ ನಂಬಿಕೆ ಹಾಗೂ ಮಹಿಳೆಯರ ಬಗ್ಗೆ ಇರುವ ಗೌರವ ಕಾರಣ ಎಂದರು.

ಭ್ರಷ್ಟಾಚಾರ ತಡೆಯಬೇಕು ಎಂಬ ಉದ್ದೇಶದಿಂದ ಪ್ರಧಾನಿ ಮೋದಿಯವರು ನೋಟು ರದ್ದು ಮಾಡಿದ್ದನ್ನು ಅಪರಾಧ ಎನ್ನುವಂತೆ ವಿಪಕ್ಷದವರು ಬೊಬ್ಬೆ ಹೊಡೆದರು. ಯಾವುದೇ ಕಾಯಿಲೆಗೆ ನೀಡುವ ಮದ್ದು ಕಹಿಯಾಗಿರುತ್ತದೆ, ಆದರೆ ಅದರ ಉದ್ದೇಶ ಕಾಯಿಲೆ ಗುಣಪಡಿಸುವುದೇ ಆಗಿರುತ್ತದೆ ಎಂದು ಹೇಳಿದರು.

ಜಗತ್ತೇ ಹೆಮ್ಮೆ ಪಡುವಂತೆ, ಪ್ರಪಂಚದಲ್ಲಿ ಭಾರತದ ಘನತೆಯನ್ನ ಎತ್ತಿಹಿಡಿದ ಮೋದಿಯವರು ವಿಶ್ವದ ಪ್ರಭಾವಿ ಪ್ರಧಾನಿಯಾಗಿದ್ದಾರೆ. ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಅದಕ್ಕಾಗಿ ದೇಶದ ಜನ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಲು ಸಿದ್ಧರಾಗಿದ್ದಾರೆ. ರಾಜ್ಯದಲ್ಲೂ ಮೋದಿ ಪರವಾದ ಅಲೆ ವ್ಯಾಪಕವಾಗಿದೆ, ಬಿಜೆಪಿ ಕಾರ್ಯಕರ್ತರು ಮೋದಿ ಸರ್ಕಾರದ ಜನಪರವಾದ ಕಾರ್ಯಕ್ರಮಗಳನ್ನು ಜನರಿಗೆ ಪ್ರಚಾರ ಮಾಡಿ, ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಶ್ರಮಿಸಬೇಕು ಎಂದು ಶೃತಿ ವಿನಂತಿಸಿದರು.

ಇಲ್ಲಿ ಪ್ರತಿಯೊಬ್ಬರೂ ಕಾವಲುದಾರರು. ಮೋದಿಯವರು ನಿಜವಾದ ಚೌಕಿದಾರ. ದೇಶವನ್ನ ಚೌಕಿದಾರ ಕಾಯುತ್ತಿರುವಾಗ ದೇಶದ ಜನರು ಕೂಡಾ ಚೌಕಿದಾರ್ ಅನ್ನುತ್ತಿದ್ದಾರೆ. ನಾನು ಭಾರತೀಯಳು ಅನ್ನುವ ಹೆಮ್ಮೆ ಹಾಗೆ ನಾನು ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕೂ ಹೆಮ್ಮೆ ಇದೆ. ಆ ಹೆಮ್ಮೆ ಬಂದಿರೋದೇ ಮೋದಿಯವರಿಂದಾಗಿ ಎಂದು ಹೇಳಿದರು.

 

ಇಡೀ ವಿಶ್ವದಲ್ಲೇ ಮೋದಿ ಅವರಿಗೆ ಗೌರವ ಸಿಗುತ್ತಿದೆ. ಮಹಿಳಾ ಪರವಾದ ಹಲವು ಕಾರ್ಯಕ್ರಮಗಳನ್ನು ಮೋದಿ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್‍ಗೆ ದೇಶದ ರಕ್ಷಣಾ ಖಾತೆ ಕೊಟ್ಟು ಮಹಿಳೆಯರ ಪ್ರಾಮುಖ್ಯತೆ ಹೆಚ್ಚಿಸಿದ್ದಾರೆ. ರಾಜ್ಯದಲ್ಲಿ ಬಂದಿರುವ ಅತಂತ್ರ ಸ್ಥಿತಿ ಕೇಂದ್ರದಲ್ಲಿ ಬರಬಾರದು. ಯಾಕಂದ್ರೆ ಇದೀಗ ದೋಸ್ತಿಗಳಲ್ಲಿ ಕುರ್ಚಿಗಾಗಿ ಕಾದಾಟ ನಡೆಯುವುದನ್ನು ನೋಡುತ್ತಿದ್ದೇವೆ. ಕಾಂಗ್ರೆಸ್ ನವರ ಬಳಿ ಕಪ್ಪು ಹಣ ಇರಬಹುದು. ಅದನ್ನೇ ಈಗ ತಿಂಗಳಿಗೆ ವರ್ಷಕ್ಕೆ 72 ಸಾವಿರ ಪ್ರಣಾಳಿಕೆ ಮಾಡಿದ್ದಾರೆ. ಅದೊಂದು ಸುಳ್ಳಿನ ಕಂತೆಯಾಗಿದೆ ಎಂದು ಟಾಂಗ್ ನೀಡಿದರು.

ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಜಯಸಾಧಿಸುತ್ತಾರೆ, ಈ ಜಿಲ್ಲೆಗೆ ಹೇಮಾವತಿ ನೀರು ನೀಡದೆ ತಡೆದಿದ್ದ ದೇವೇಗೌಡರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ನಗರ ಬಿಜೆಪಿ ಅಧ್ಯಕ್ಷ ಸಿ.ಎನ್. ರಮೇಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜ ಗೌಡ, ಮುಖಂಡರಾದ ಹೆಚ್ ಎಂ ರವೀಶ್, ಪ್ರೇಮಾ ಹೆಗಡೆ ಮೊದಲಾದವರು ಭಾಗವಹಿಸಿದ್ದರು.