ನಾಳೆ ಮಂಗಳೂರಲ್ಲಿ ಮೋದಿ ಹವಾ….

Featured, ದಕ್ಷಿಣ ಕನ್ನಡ

ಮಂಗಳೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 5ರಂದು ಬಿಜೆಪಿ ಪರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಸಮಾವೇಶ ನಡೆಯುವ ಕೇಂದ್ರ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ವಿಶೇಷ ಭದ್ರತಾ ಸಿಬ್ಬಂದಿ (ಎಸ್‌ಪಿಜಿ) ಈಗಾಗಲೇ ಮಂಗಳೂರು ತಲುಪಿದ್ದಾರೆ. ವೇದಿಕೆ ಹಾಗೂ ಸಭಾಂಗಣ ನಿರ್ಮಾಣ ಮಾಡುವಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪಾಂಡೇಶ್ವರ ಪೊಲೀಸರು ಮೈದಾನದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಮೈದಾನದ ಸುತ್ತ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಎಲ್ಲ ರೀತಿಯ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅರೆ ಸೇನಾಪಡೆ, ಹೊರ ರಾಜ್ಯದ ಪೊಲೀಸ್ ಪಡೆ, ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್ ಶುಕ್ರವಾರ ಸಾಯಂಕಾಲ ಮೈದಾನಕ್ಕೆ ಆಗಮಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ, ರಾಜ್ಯ ನಾಯಕರು ಹಾಗೂ ಲಕ್ಷಾಂತರ ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೈದಾನದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಗುರುವಾರ ಸಂಸದ ನಳಿನ್ ಕುಮಾರ್ ಕಟೀಲು, ಮುಖಂಡರಾದ ಮೋನಪ್ಪ ಭಂಡಾರಿ, ರುಕ್ಮಯ್ಯ ಪೂಜಾರಿ, ಸುದರ್ಶನ್, ನಿತಿನ್ ಕುಮಾರ್, ಪ್ರಸಾದ್ ಮೊದಲಾದವರು ವೀಕ್ಷಿಸಿದರು.

ವಾಹನ ನಿಲುಗಡೆ ನಿಷೇಧ:

ಮೋದಿ ಸಂಚರಿಸುವ ರಸ್ತೆಯಲ್ಲಿ ಭದ್ರತೆ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ಮೇ 5ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆ ತನಕ ರಸ್ತೆ ಬದಿ ವಾಹನ ನಿಲುಗಡೆ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು-ಮರವೂರು-ಮರಕಡ-ಕಾವೂರು-ಯೆಯ್ಯಡಿ-ಸರ್ಕ್ಯೂಟ್ ಹೌಸ್, ಕದ್ರಿ ಕಂಬಳ-ಬಂಟ್ಸ್ ಹಾಸ್ಟೆಲ್-ಡಾ.ಅಂಬೇಡ್ಕರ್ ವೃತ್ತ-ಹಂಪನಕಟ್ಟೆ- ಎ.ಬಿ.ಶೆಟ್ಟಿ ವೃತ್ತ, ಕೇಂದ್ರ ಮೈದಾನದ ತನಕ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ರೀತಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಕೇಂದ್ರ ಮೈದಾನ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಹಾಗೂ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ (ರಾತ್ರಿ 9 ಗಂಟೆ ತನಕ) ಎಲ್ಲ ತರಹದ ವಾಹನಗಳನ್ನು ಅನವಶ್ಯಕವಾಗಿ ವಾಹನ ನಿಲುಗಡೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಮೋದಿ ಮೋಡಿ ನಿರೀಕ್ಷೆಯಲ್ಲಿ ಬಿಜೆಪಿ:

2013ರ ವಿಧಾನಸಭೆ ಚುನಾವಣೆ ಸಂದರ್ಭ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಮಂಗಳೂರಿಗೆ ಆಗಮಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು.
ಆದರೆ, ಮೋದಿ ಭಾಷಣದ ಮೋಡಿ ನಡೆಯದೆ, ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭ ಪ್ರಧಾನಿ ಅಭ್ಯರ್ಥಿಯಾಗಿ ಆಗಮಿಸಿದ ಮೋದಿ ಕೇಂದ್ರ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದರು. ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಪ್ರಥಮವಾಗಿ ಭಾರೀ ಸಂಖ್ಯೆಯ ಜನ ಆ ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ 1.43 ಲಕ್ಷ ಮತಗಳ ಅಂತರದ ಜಯ ಸಾಧಿಸಿತ್ತು. ಮೋದಿ ಮೋಡಿ ಯಶಸ್ವಿಯಾಗಿತ್ತು.
ಪ್ರಸಕ್ತ ಜಿಲ್ಲೆಯ ರಾಜಕೀಯ ವಾತಾವರಣ ಪ್ರಧಾನಿ ಪ್ರವಾಸದ ಬಳಿಕ ಸಾಕಷ್ಟು ಬದಲಾಗುತ್ತದೆ ಎನ್ನುವ ನಿರೀಕ್ಷೆ ಬಿಜೆಪಿಯಲ್ಲಿದೆ.