ನೆಹರೂ ಬದಲಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿಯಾಗಿದ್ದರೆ, ಕಾಶ್ಮೀರ ಸಮಸ್ಯೆ ಉದ್ಬವಿಸುತ್ತಿರಲಿಲ್ಲ-ಅಮಿತ್ ಶಾ -Vishwanews24
ನವದೆಹಲಿ :ಕಾಶ್ಮೀರ ಸಮಸ್ಯೆ ಕಗ್ಗಂಟಾಗಿ ಉಳಿಯಲು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಕಾರಣ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆರೋಪಿಸಿದ್ದಾರೆ.
1947 ರಲ್ಲಿ ಜವಾಹರ್ಲಾಲ್ ನೆಹರೂ ಬದಲಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿಯಾಗಿದ್ದರೆ, ಇಂತಹ ಯಾವುದೇ ಸಮಸ್ಯೆಗಳೇ ಉದ್ಬವಿಸುತ್ತಿರಲಿಲ್ಲ ಎಂದು ಹೇಳಿದರು.
ಸರ್ದಾರ್ ಪಟೇಲ್ ಅವರು ಹೈದರಾಬಾದ್ ಅನ್ನು ನಿಭಾಯಿಸಿದರು. ಹೀಗಾಗಿ ಅದು ಈಗ ಭಾರತದ ಗೌರವಯುತ ಭಾಗವಾಗಿದೆ. ಆದರೆ ನೆಹರೂ ಕಾಶ್ಮೀರವನ್ನು ನಿಭಾಯಿಸಿದ್ದರಿಂದ ಅದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪಾಕಿಸ್ಥಾನ ಕಾಶ್ಮೀರಕ್ಕಾಗಿ ಉಗ್ರವಾದವನ್ನು ಮಾಡುತ್ತಿದೆ. ಈ ಸಮಸ್ಯೆಗೆ ಯಾರಾದರೂ ಜವಾಬ್ಧಾರಾಗಿದ್ದರೆ ಅದು ನೆಹರೂ. ಸರ್ದಾರ್ ಪಟೇಲ್ ಅವರು ಅಂದು ಪ್ರಧಾನಿಯಾಗಿರುತ್ತಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಕೈ ನಾಯಕರ ಟೀಕೆಗೆ ಎದಿರೇಟು ನೀಡಿದರು. ಪ್ರಧಾನಿ ದೇಶಕ್ಕಾಗಿ 18 ಗಂಟೆಗಳ ನಿರಂತರ ಕೆಲಸ ಮಾಡುತ್ತಿದ್ದಾರೆ. ದೇಶದ ರಕ್ಷಣೆಗೆ ಅವರು ಸದಾ ಸಿದ್ಧರಿದ್ದಾರೆ. ನೀವು ನಿರಂತರ ಆರೋಪ ಮಾಡುವುದರಿಂದ ಪ್ರಧಾನಿ ಮೇಲಿನ ಜನರ ನಂಬಿಕೆಯನ್ನ ಕಸಿದುಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿರುಗೇಟು ನೀಡಿದರು.

