ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಡಿನ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ -Vishwanews24

Featured, ರಾಜ್ಯ ನ್ಯೂಸ್

ಬೆಳಗಾವಿ: ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಡಿನ ದಾಳಿಯಲ್ಲಿ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ರಾಹುಲ್ ಭೈರು ಸುಳಗೇಕರ (25) ಹುತಾತ್ಮರಾಗಿದ್ದಾರೆ.

ಪಾಕ್ ಪಡೆಗಳು ಗುರುವಾರ ರಾತ್ರಿ ಕದನ ವಿರಾಮ ಉಲ್ಲಂಘಿಸಿ ಜಮ್ಮು-ಕಾಶ್ಮೀರದ ಕೃಷ್ಣಘಾಟಿ ಸೆಕ್ಟರ್​ನಲ್ಲಿ ಅಪ್ರಚೋದಿತ ದಾಳಿ ಆರಂಭಿಸಿದ್ದವು. ಪಾಕ್​ ಪುಂಡಾಟಕ್ಕೆ ಭಾರತದ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲಾರಂಭಿಸಿದವು. ಈ ವೇಳೆ ರಾಹುಲ್ ಸುಳಗೇಕರ ಗುಂಡು ತಗುಲಿ ವೀರಮರಣ ಹೊಂದಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಸೇನೆ ಸೇರಿ ದೇಶ ಸೇವೆಯ ಕನಸು ಕಂಡಿದ್ದ ಸುಳಗೇಕರ, 4 ವರ್ಷಗಳ ಹಿಂದೆಯೇ ಸೇನೆಗೆ ಸೇರ್ಪಡೆಯಾಗಿದ್ದರು. ಗಣೇಶ ಉತ್ಸವ ವೇಳೆ ರಜೆ ಪಡೆದು ತವರಿಗೆ ಬಂದಿದ್ದರು.‌ ಹಬ್ಬ ಮುಗಿಸಿಕೊಂಡು ಕರ್ತವ್ಯಕ್ಕೆ ಮರಳಿದ್ದರು.

ಜಮ್ಮುವಿನ ಪುಂಚ್ ಬಳಿ ಭಯೋತ್ಪಾದಕರೊಂದಿಗೆ ಸೆಣಸಾಡುವಾಗ ಗುಂಡು ತಗುಲಿ ಹುತಾತ್ಮನಾಗಿದ್ದಾರೆ. ರಾಹುಲ್ ಅಣ್ಣ ಮಯೂರ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಹುಲ್‌ ಅವರ ತಂದೆ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತನ್ನ ಇಬ್ಬರೂ ಮಕ್ಕಳನ್ನೂ ಸೇನೆಗೆ ಸೇರಿಸಿ ತಂದೆ ಭೈರು ಸುಳಗೇಕರ‌ ದೇಶಾಭಿಮಾನ ಮೆರೆದಿದ್ದಾರೆ.