ಪುಲ್ವಾಮಾದಲ್ಲಿ ಯೋಧರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಉಗ್ರಗಾಮಿ ಸಂಘಟನೆಯ ನಾಲ್ವರು ಭಯೋತ್ಪಾದಕರ ಬಲಿ – Vishwanews24
ಶ್ರೀನಗರ,: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರು ಭರ್ಜರಿ ಬೇಟೆಯಾಡಿದ್ದಾರೆ. ಭದ್ರತಾ ಸಿಬ್ಬಂದಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಲಷ್ಕರ್-ಎ-ತಯ್ಬಾ (ಎಲ್‍ಇಟಿ) ಉಗ್ರಗಾಮಿ ಸಂಘಟನೆಯ ನಾಲ್ವರು ಭಯೋತ್ಪಾದಕರು ಬಲಿಯಾಗಿದ್ದಾರೆ.
ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಪುಲ್ವಾಮಾದಲ್ಲಿ ಸಂಭವಿಸಬಹುದಾಗಿದ್ದ ಭಾರೀ ವಿದ್ವಂಸಕ ಕೃತ್ಯ ತಪ್ಪಿದಂತಾಗಿದೆ.
ಪುಲ್ವಾಮದ ಲಸ್ಸಿಪೋರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಬೆಳಗಿನ ಜಾವ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಭಯೋತ್ಪಾದಕರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದರು.
ನಂತರ ನಡೆದ ಎನ್‍ಕೌಂಟರ್‍ನಲ್ಲಿ ನಾಲ್ವರು ಎಲ್‍ಇಟಿ ಉಗ್ರರು ಹತರಾದರು. ಅವರ ಬಳಿ ವಿದ್ವಂಸಕ ಕೃತ್ಯ ಎಸಗಲು ಸಂಗ್ರಹಿಸಲಾಗಿದ್ದ ಭಾರೀ ಪ್ರಮಾಣದ ಸ್ಫೋಟಕಗಳು, ರೈಫಲ್‍ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರ ಕರ್ನಲ್ ರಾಜೇಶ್‍ಖಾಲಿಯಾ ತಿಳಿಸಿದ್ದಾರೆ.
ಈ ಕಾರ್ಯಾಚರಣೆ ವೇಳೆ ಕೆಲವು ಯೋಧರಿಗೆ ಗಾಯಗಳಾಗಿವೆ. ಭದ್ರತಾ ಸಿಬ್ಬಂದಿ ಗುಂಡಿಗೆ ಬಲಿಯಾದವರು ಲಷ್ಕರ್-ಎ-ತಯ್ಬಾ ಉಗ್ರರು ಎಂಬುದು ಖಚಿತ ಪಟ್ಟಿದೆ.
ಪುಲ್ವಾಮ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಯೋಧರು ಮತ್ತು ನಾಗರಿಕರನ್ನು ಗುರಿಯಾಗಿಟ್ಟುಕೊಂಡು ವಿದ್ವಂಶಕ ಕೃತ್ಯ ಎಸಗಲು ಈ ಉಗ್ರರು ಸಜ್ಜಾಗಿದ್ದರು ಎಂಬ ಸಂಗತಿಯೂ ಬಯಲಾಗಿದೆ. ಈ ಪ್ರದೇಶದಲ್ಲಿ ಅಡಗಿರಬಹುದಾದ ಉಗ್ರರಿಗಾಗಿ ಯೋಧರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
