ಬೆಂಗಳೂರು: ತಮ್ಮ ಪ್ರಖರ ಮತುಗಳು, ದಿಟ್ಟ ಸಾಮಾಜಿಕ, ಜನಪರ ಕಾಳಜಿಯ ಮೂಲಕ ರಾಜ್ಯದ ಜನಸಾಮಾನ್ಯರ ಕಣ್ಮಣಿಯಾಗಿದ್ದ ಮಹೇಂದ್ರ ಕುಮಾರ್ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.
ಬಜರಂಗದಳದ ಮೂಲಕ ತಮ್ಮ ಸಾಮಾಜಿಕ ಜೀವನ ಆರಂಭಿಸಿದ್ದ ಮಹೇಂದ್ರ ಕುಮಾರ್ ಬಳಿಕ ಸಂಘಟನೆಯನ್ನು ಬಿಟ್ಟು ಸರ್ವಧರ್ಮ ಸೌಹಾರ್ದ, ಸಾಮಾರಸ್ಯದ ಕುರಿತು ಕಾಳಜಿಯಿಂದ ದುಡಿಯುತ್ತಿದ್ದರು. ರಾಜ್ಯದಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದರು. ಸಿಎಎ, ಎನ್ಆರ್ಸಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿದ್ದರು.
ನಿನ್ನೆ ರಾತ್ರಿಯಿಂದ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು ಮುಂಜಾನೆ ರಾಮಯ್ಯ ಆಸ್ಪತ್ರೆಯಲ್ಲಿ ಅವರು ಮೃತರಾಗಿದ್ದಾರೆ. ಮಹೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.