ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರಕ್ಕೆ ರಾಜ್ಯಾದ್ಯಂತ ‘ಟೀಂ ಮೋದಿ’ ಸಜ್ಜು..

Featured, ರಾಜ್ಯ ನ್ಯೂಸ್

ಬೆಂಗಳೂರು : ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೆ ಸಜ್ಜಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯಾಗಿಸಲು ಚಕ್ರವರ್ತಿ ನೇತೃತ್ವದ  ‘ಟೀಂ ಮೋದಿ’ ಸಿದ್ಧವಾಗಿದೆ. ಮೋದಿ ಸರಕಾರ 5 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದು, ಈಗ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮತ್ತೂಮ್ಮೆ ಮೋದಿಯವರನ್ನು ಪ್ರಧಾನಿ ಮಾಡಬೇಕು ಎಂಬ ಉದ್ದೇಶದೊಂದಿಗೆ ವಿನೂತನ ಕಾರ್ಯಕ್ರಮಗಳೊಂದಿಗೆ ಟೀಂ ಮೋದಿ ಕಾರ್ಯಾರಂಭಿಸಿದೆ.

ಈ ವೇಳೆ ಟೀಂ ಮೋದಿ ಸಂಘಟಕ ಸುನೀಲ ಸಕ್ರೀ ಮಾತನಾಡಿ, ಪ್ರಧಾನಿ ಮೋದಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿ ನಾಯಕರಾಗಿದ್ದಾರೆ. ಆದರೆ, ಅವರು ಪ್ರಧಾನಿಯಾದ ಬಳಿಕ ದೇಶದಲ್ಲಾದ ಹಲವು ಬದಲಾವಣೆಗಳು ಜನರ ಕಣ್ಣಿಗೆ ಕಾಣದಿರುವಂತೆ ಮಾಡಲು ಅನೇಕ ರಾಜಕೀಯ ಪಕ್ಷಗಳು ಕುತಂತ್ರದಿಂದ ಆರೋಪ ಮಾಡುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಿ, ಜನಪರ ಯೋಜನೆಗಳನ್ನು ಜನರ ಬಳಿ ತೆರೆದಿಡುವ ಉದ್ದೇಶದಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರಂತಲ್ಲದೆ, ವಿಭಿನ್ನವಾಗಿ ಮೂರನೇ ವ್ಯಕ್ತಿಯಾಗಿ ಚುನಾವಣಾ ಪ್ರಚಾರದ ಉದ್ದೇಶ ಟೀಂ ಮೋದಿ ಹೊಂದಿದೆ ಎಂದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಧ್ಯೇಯಕ್ಕೆ ಬದ್ದವಾಗಿರುವ ಮೋದಿ ದೇಶದ 135 ಹಿಂದುಳಿದ ಜಿಲ್ಲೆಗಳಲ್ಲಿ 2022ರ ಹೊತ್ತಿಗೆ ಮಹತ್ವದ ಬದಲಾವಣೆ ತರುವ ಸಂಕಲ್ಪ ಮಾಡಿದ್ದಾರೆ ಎಂದರು..

ಟೀಂ ಮೋದಿಗೆ ಚಾಲನೆ 
‘ಟೀಂ ಮೋದಿ’ ಸಂಘಟನೆಗೆ ರವಿವಾರ ರಾಜ್ಯಾದ್ಯಂತ ಬೈಕ್‌ ಜಾಥಾ ಮೂಲಕ ಚಾಲನೆ ಸಿಕ್ಕಿದೆ. ಉಡುಪಿ, ಮಂಗಳೂರು, ಮೈಸೂರು, ಯಾದಗಿರಿ, ಮುಂಡಗೋಡು, ನೆಲಮಂಗಲ ಸಹಿತ ರಾಜ್ಯದ 357 ಕಡೆಗಳಲ್ಲಿ ಬೈಕ್‌ ಜಾಥಾ ಮೂಲಕ ಮೋದಿಯವರ ಸಾಧನೆಯ ಮಾಹಿತಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆದಿದೆ. ಎಲ್ಲೆಲ್ಲಿ ಬೈಕ್‌ ಜಾಥಾಗೆ ಅವಕಾಶ ಸಿಕ್ಕಿಲ್ಲವೋ ಅಲ್ಲಿ ಪಾದಯಾತ್ರೆ ಮೂಲಕ ಟೀಂ ಮೋದಿ ಕಾರ್ಯಾರಂಭಿಸಿದೆ. ಪಾದಯಾತ್ರೆಗೂ ಅವಕಾಶ ನೀಡದ ಕಡೆಗಳಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ ‘ಟೀಂ ಮೋದಿ’ ಕಾಯಕ ಆರಂಭಿಸಿದೆ.