ಪ್ಲಾಸ್ಟಿಕ್ ಮಹಾಮಾರಿ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ವಂದೇ ಮಾತರಂ’ ಹಾಡಿನ ಮೂಲಕ ವಿಶಿಷ್ಟ ಪ್ರಯತ್ನ -Vishwanews24
ಕುಂದಾಪುರ: ಪ್ಲಾಸ್ಟಿಕ್ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶಿಷ್ಟ ಪ್ರಯತ್ನವೊಂದನ್ನು ಮಾಡಲಾಗಿದೆ. ವಂದೇ ಮಾತರಂ ಹಾಡನ್ನು ಬಳಸಿಕೊಂಡು ವೀಡಿಯೊ ಸಾಂಗ್ ತಯಾರಿಸಿದ್ದು ಮನಮಟ್ಟುವಂತೆ ಮೂಡಿಬಂದಿದೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಟೀಮ್ ಹಾಗೂ ಲೈಫ್‌ಲೈಕ್ ಪ್ರೊಡಕ್ಷನ್ ಸಹಯೋಗದಲ್ಲಿ ಎರಡೂವರೆ ನಿಮಿಷಗಳ ಈ ವೀಡಿಯೋ ತಯಾರಿಸಲಾಗಿದೆ.
ಭೂದೇವಿ ಪ್ಲಾಸ್ಟಿಕ್ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಕಥಾ ಹಂದರವನ್ನು ಇಟ್ಟುಕೊಂಡು ಹಾಡನ್ನು ಚಿತ್ರಕರಿಸಲಾಗಿದ್ದು, ಇದಕ್ಕೆ ವಂದೇ ಮಾತರಂ ಹಾಡನ್ನು ಬಳಸಿಕೊಳ್ಳಲಾಗಿದೆ. 3.4 ನಿಮಿಷ ಅವಧಿಯ ಈ ಹಾಡಿನಲ್ಲಿ ಭೂಮಿ ಕಾಯುವ ದೈವ ಮರೆಯಾದ ಭೂಮಿಯ ಸೌಂದರ್ಯವನ್ನು ಹುಡುಕುತ್ತಾ ಪ್ಲಾಸ್ಟಿಕ್ ಎಂಬ ರಕ್ಕಸನೊಂದಿಗೆ ಹೋರಾಡುವ ಸನ್ನಿವೇಶವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಡಾ. ರಶ್ಮಿ ಕುಂದಾಪುರ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಎಂಬ ಸಮಾನ ಮನಸ್ಕರ ತಂಡವೊಂದು ಕಳೆದ 33 ವಾರಗಳಿಂದ ಕುಂದಾಪುರ ಕಡಲ ಕಿನಾರೆಯ ಸ್ವಚ್ಛತೆಯನ್ನು ಮಾಡಿ, ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಮೂರು ಜನರಿಂದ ಆರಂಭಗೊಂಡ ಈ ತಂಡದಲ್ಲಿ ಈಗ 33 ಮಂದಿ ಇದ್ದಾರೆ. ಈಗಾಗಲೇ ಗೋಪಾಡಿ, ಕೋಡಿ, ಕುಂಬಾಡಿ, ಕೋಟೇಶ್ವರ, ಮಾಬುಕಲ ಹೀಗೆ ಕಡಲ ಕಿನಾರೆಯಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ಲಾಸ್ಟಿಕ್ ಜನಜಾಗೃತಿಯನ್ನು ದೊಡ್ಡಮಟ್ಟದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವಿಡಿಯೋ ಹಾಡನ್ನು ತಯಾರಿಸಲಾಗಿದೆ ಎಂದರು.

ಮೂರು ದಿನಗಳ ಹಿಂದೆ ಈ ಹಾಡನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಈವರೆಗೆ 16 ಸಾವಿರ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಡಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕಲಾವಿದರಾಗಿ ಶ್ರುತಿ ಜೈನ್ ರೆಂಜಾಳ, ಸತ್ಯನಾರಾಯಣ ಮಂಜ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ಅವರ ಮೂಲ ವಂದೇ ಮಾತರಂ ಹಾಡನ್ನು ಬಳಕೆ ಮಾಡಿಕೊಂಡು ದೇಶಭಕ್ತಿಗೀತೆಗೆ ಪರ್ಯಾಯವಾಗಿ ಭೂಮಿ ಭಕ್ತಿಗೀತೆಯನ್ನಾಗಿ ರೂಪಿಸಲಾಗಿದೆ. ಅಕ್ಷತಾ ಹಾವಂಜೆ ಅವರ ಸುಮಧುರ ಕಂಠದಲ್ಲಿ ಮೂಡಿ ಬಂದಿರುವ ಸಂಗೀತಕ್ಕೆ ಡೇನಿಯಲ್ ಮತ್ತು ಸುಹಿತ್ ಸಾಹಿತ್ಯ ರಚಿಸಿದ್ದಾರೆ. ಯತೀಶ್ ರೈ ಸಿನಿಮಾಟೋಗ್ರಫಿ ಮಾಡಿದ್ದಾರೆ. ಕರಾವಳಿಯ ಸಂಸ್ಕೃತಿಯ ನೋಟದೊಂದಿಗೆ ಪ್ಲಾಸ್ಟಿಕ್‌ನಿಂದ ಭೂಮಿ ರಕ್ಷಿಸಬೇಕೆಂಬ ಸಂದೇಶ ಸಾರುವ ವೀಡಿಯೋ ಸಾಂಗ್ ಮನೋಜ್ಞವಾಗಿದೆ.
ಗೋಷ್ಠಿಯಲ್ಲಿ ಸಂಗೀತ ನಿರ್ದೇಶಕರಾದ ಡೆನಿಯಲ್ ಮತ್ತು ಸುಹೀತ್, ಅಕ್ಷತಾ ಹಾವಂಜೆ, ನಿರ್ಮಾಪಕ ಚಂದ್ರಕಾಂತ್ ಶೆಣೈ ಇದ್ದರು.
