‘ಫ್ರೀ ಕಾಶ್ಮೀರ’ ಪೋಸ್ಟರ್ ಪ್ರದರ್ಶಿಸಿದ ಯುವತಿ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ -Vishwanews24
ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈಚೆಗೆ ಪ್ರತಿಭಟನೆ ಸಮಯದಲ್ಲಿ ‘ಫ್ರೀ ಕಾಶ್ಮೀರ’ ಫಲಕ ಹಿಡಿದ ಯುವತಿ ಬಿ.ನಳಿನಿ ಪರವಾಗಿ ವಕೀಲರು ವಕಾಲತ್ತು ವಹಿಸಬಾರದು ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸಭೆ ಮಂಗಳವಾರ ನಿರ್ಣಯ ಕೈಗೊಂಡಿದೆ.
ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶಿಸಿದ ಯುವತಿ ಪರವಾಗಿ ಮೈಸೂರಿನ ಯಾವ ವಕೀಲರೂ ವಕಾಲತು ವಹಿಸಬಾರದು. ಈ ಹಿಂದೆ ಕೂಡ ಇಂತಹ ಪ್ರಕರಣಗಳಲ್ಲಿ ಆರೋಪಿ ಪರ ಯಾರೂ ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ ಎಂದು ಯುವ ವಕೀಲರು ಮೈಸೂರಿನ ವಕೀಲರ ಸಂಘದ ಅಧ್ಯಕ್ಷ ಆನಂದ ಕುಮಾರ್ಗೆ ಮನವಿ ಮಾಡಿದ್ದರು.
ಇದಕ್ಕೂ ಮುನ್ನ ಕೆಲವು ವಕೀಲರು ವಕಾಲತ್ತು ವಹಿಸದಂತೆ ನಿರ್ಣಯ ಕೈಗೊಳ್ಳಬೇಕು ಎಂದು ಸಂಘಕ್ಕೆ ಮನವಿ ಪತ್ರ ಕೊಟ್ಟಿದ್ದರು. ಈ ಹಿಂದೆ ವಕಾಲತ್ತು ವಹಿಸಿದ್ದ ವಕೀಲ ಪೃಥ್ವಿ ಸಹ ವೈಯಕ್ತಿಕ ಕಾರಣಗಳನ್ನು ನೀಡಿ ಪ್ರಕರಣದಿಂದ ಹಿಂದೆ ಸರಿದಿದ್ದರು.
ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿರುವುದಕ್ಕೆ ಪೊಲೀಸರು ಮಂಗಳವಾರ ಆಕ್ಷೇಪಣೆ ಸಲ್ಲಿಸಬೇಕಿದೆ. ಪ್ರಕರಣ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.
