ಕಾಪು: ಕಾಪುವಿನ ಹಿರಿಯ ವೈದ್ಯ ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಗೌರವಾಧ್ಯಕ್ಷ, ಪ್ರಶಾಂತ್ ಹಾಸ್ಪಿಟಲ್‌ನ ಸಂಸ್ಥಾಪಕ, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣೀಯ ಕ್ಷೇತ್ರದ ಸಾಧಕ ಡಾ| ಕೆ. ಪ್ರಭಾಕರ ಶೆಟ್ಟಿ (81) ತಮ್ಮ ಬದುಕಿನ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ ನಡೆಯಿತು.
ಮೃತರು ಪತ್ನಿ ಶ್ರೀ ಕಾಪು ಗೋವಿಂದ ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷೆ ಶೋಭಾ ಪಿ. ಶೆಟ್ಟಿ ಮತ್ತು ಪುತ್ರ ಗೃಹರಕ್ಷಕದಳದ ಉಡುಪಿ ಜಿಲ್ಲಾ ಕಮಾಂಡೆಂಟ್ / ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಡಾ| ಕೆ. ಪ್ರಶಾಂತ್ ಶೆಟ್ಟಿ ಅವರನ್ನು ಅಗಲಿದ್ದಾರೆ.
ಧಾರ್ಮಿಕ ಸೇವೆ : ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿದ್ದ ಅವರು ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ದೇವಸ್ಥಾನದ ಅಭಿವೃದ್ಧಿಗಾಗಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದರು. ಕಾಪು ಶಾಂತಿ ಪಾಲನಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಹಲವು ವರ್ಷಗಳ ಹಿಂದೆ ಸಂಭವಿಸಿದ್ದ ಕೋಮು ಘರ್ಷಣೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.
ಶೈಕ್ಷಣಿಕ ಕ್ಷೇತ್ರ : ಉಳಿಯಾರಗೋಳಿ ದಂಡತೀರ್ಥ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕತ್ವವನ್ನು ವಹಿಸಿಕೊಂಡ ಅವರು ಬಳಿಕ ಗ್ರಾಮೀಣ ವಿದ್ಯಾರ್ಥಿಗಳ ಅವಶ್ಯಕತೆಗನುಣವಾಗಿ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ ಮತ್ತು ದಂಡತೀರ್ಥ ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಶಕ್ತಿಮೀರಿದ ಶ್ರಮ ವಹಿಸಿದ್ದರು. ಸಂಸ್ಥೆಯಲ್ಲಿ ಕಲಿಯುತ್ತಿರುವ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ದಾನಿಗಳ ಸಹಕಾರದೊಂದಿಗೆ 8 ಲಕ್ಷ ರೂ. ಗಳಷ್ಟು ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿರುವ ಅವರು, ಪ್ರಶಾಂತ್ ಪ್ಯಾರಾ ಮೆಡಿಕಲ್ ಕಾಲೇಜಿನ ಸ್ಥಾಪನೆಗೂ ಕಾರಣೀಕರ್ತರಾಗಿದ್ದರು. ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ, ಕಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸಾಮಾಜಿಕ ಮುಖಂಡ : ಉಡುಪಿ ಜಿಲ್ಲಾ ಖಾಸಗಿ ಆಸ್ಪತ್ರೆಗಳ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಐಎಂಎ ಕರಾವಳಿ ಇದರ ಅಧ್ಯಕ್ಷರಾಗಿ, ಉಡುಪಿ ಕರಾವಳಿ ಐಎಂಎ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಹಿಂದ್ ಕುಷ್ಠ ನಿವಾರಣಾ ಸಂಘ ಕಾಪು ಘಟಕದ ಗೌರವ ವೈದ್ಯಾಧಿಕಾರಿಯಾಗಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಲಹಾ ಸಮಿತಿಯ ಸದಸ್ಯರಾಗಿ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೀಕ್ಷಕ ವಿಭಾಗದ ಸದಸ್ಯರಾಗಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾಗಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಜೀವ ಸದಸ್ಯರಾಗಿ, ಕಾಪು ಲಯನ್ಸ್ ಕ್ಲಬ್‌ನ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಜಿಲ್ಲಾ ಕ್ಯಾಬಿನೆಟ್ ಸದಸ್ಯರಾಗಿ, ಭಾರತೀಯ ಜೀವ ವಿಮಾ ನಗಮದ ವೈದ್ಯಕೀಯ ಪರಿವೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.
ಹರಸಿ ಬಂದಿತ್ತು ಸಮ್ಮಾನ -ಪುರಸ್ಕಾರಗಳು : ಕಾಪುವಿನ ಪ್ರಥಮ ಚಿನ್ನದ ಪದಕ ಪುರಸ್ಕೃತ ವೈದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು 55 ವರ್ಷಗಳ ಸುದೀರ್ಘ ಅವಧಿಯ ಗ್ರಾಮೀಣ ಸೇವೆಗಾಗಿ ಹಲವು ಗೌರವ – ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ. ಮಂಗಳೂರು ಬಂಟರ ಮಾತೃ ಸಂಘದಿಂದ ಚಿನ್ನದ ಪದಕ, ಲಯನ್ಸ್ ಸೇವಾ ಪುರಸ್ಕಾರ, ಗ್ರಾಮೀಣ ಸೇವೆಗಾಗಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಸಿಂಡಿಕೇಟ್ ಬ್ಯಾಂಕ್, ರೋಟರಿ ಕ್ಲಬ್ ಸಹಭಾಗಿತ್ವದ ಹೊಸ ವರ್ಷದ ಸಾಧನಾ ಪ್ರಶಸ್ತಿ, ಕರ್ನಾಟಕ ಸ್ಟೇಟ್ ಮೆಡಿಕಲ್ ಅಸೋಸಿಯೇಶನ್, ಐ.ಎಮ್.ಎ. ಉಡುಪಿ ಕರಾವಳಿಯಿಂದ ಸಮ್ಮಾನ, ಕಾಪು ತುಳುಕೂಟ, ಉಡುಪಿ ಜಯಂಟ್ಸ್ ಸಂಸ್ಥೆಗಳಿಂದ ಸಮ್ಮಾನ, ಶೀರೂರು ಮಠದಿಂದ ಶ್ರೀ ಕೃಷ್ಣ ವಿಠಲ ಪರಮಾನುಗ್ರಹ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಮೊದಲಾದ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…