ಬಿಜೆಪಿಗೆ 100 ಮಂದಿ ಕಾರ್ಯಕರ್ತರ ಸೇರ್ಪಡೆ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ನಾಲ್ಕೂರು, ಹೇರೂರು, ಕೊಕ್ಕರ್ಣೆ ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ನ 100 ಕಾರ್ಯಕರ್ತರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್, ಹಿರಿಯ ನಾಯಕ ಕೆ. ಜಯಪ್ರಕಾಶ್ ಹೆಗ್ಡೆ ಅವರ ಸಮ್ಮುಖ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಕಾರ್ಯಕರ್ತರನ್ನು ಸ್ವಾಗತಿಸಿದ ಕೆ. ರಘುಪತಿ ಭಟ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಹತಾಶರಾದ ಕಾರ್ಯಕರ್ತರು ಪ್ರತಿನಿತ್ಯ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರೆ ಇದರರ್ಥ ಬಿಜೆಪಿ ಪಕ್ಷದ ಮೇಲೆ ಜನತೆಗೆ ಅತಿ ಹೆಚ್ಚು ವಿಶ್ವಾಸ ಮೂಡಿದೆ ಎನ್ನಬಹುದು. ಪ್ರಮೋದ್ ಮಧ್ವರಾಜ್ ತಮ್ಮ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ. ಕಾರ್ಯಕರ್ತರನ್ನು ಅಗೌರವದಿಂದ ಕಂಡರೆ ಯಾವುದೇ ಜನಪ್ರತಿನಿಧಿಯಾಗಲಿ ಅವರೊಂದಿಗೆ ಇರುವುದಿಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇದು ಎಲ್ಲ ಜನಪ್ರತಿಗಳಿಗೂ ಒಂದು ಪಾಠ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಿಜೆಪಿ ಪಕ್ಷದತ್ತ ಕಾರ್ಯಕರ್ತರು ಆಕರ್ಷಿತರಾಗಲು ಪಕ್ಷದ ನಿಲುವು, ಧ್ಯೇಯೋದ್ಧೇಶಗಳೇ ಕಾರಣ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಕ್ಷೇತ್ರದ ಚಿತ್ರಣವನ್ನು ಬದಲಾಯಿಸುವ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.
ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಕೊಡದೆ, ಅಸ್ಪ್ರಶ್ಯರಂತೆ ಕಂಡ ಹಿನ್ನೆಲೆಯಲ್ಲಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಪಕ್ಷದ ತಣ್ತೀ ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದವರು ತಿಳಿಸಿದರು.
ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಮಾರಾಳಿ ಪ್ರತಾಪ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಮಾರಾಳಿ ಸಂತೋಷ್ ಹೆಗ್ಡೆ, ಅಶೋಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಕಿಣಿ ಸ್ವಾಗತಿಸಿ, ನಿರೂಪಿಸಿದರು.
